ಗೋಲ್ಡ್ ಕಪ್ ಫುಟ್ಬಾಲ್: ಇಂದು ಸೆಮಿಫೈನಲ್‌

| Published : May 23 2025, 11:52 PM IST / Updated: May 23 2025, 11:53 PM IST

ಸಾರಾಂಶ

ಧಾರಕಾರ ಮಳೆಯ ನಡುವೆಯೂ ನಡೆದ ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ವಾಲ್‌ಪರಿ ಎಫ್.ಸಿ ತಮಿಳುನಾಡು, ಮಿಡ್‌ಸಿಟಿ ಸುಂಟಿಕೊಪ್ಪ, ಎನ್‌ವೈಸಿ ಕೊಡಗರಹಳ್ಳಿ ಹಾಗೂ ಬೆಟ್ಟಗೇರಿ ಎಫ್.ಸಿ. ಸುಂಟಿಕೊಪ್ಪ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಧಾರಕಾರ ಮಳೆಯ ನಡುವೆಯೂ ನಡೆದ ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ವಾಲ್‌ಪರಿ ಎಫ್.ಸಿ ತಮಿಳುನಾಡು, ಮಿಡ್‌ಸಿಟಿ ಸುಂಟಿಕೊಪ್ಪ, ಎನ್‌ವೈಸಿ ಕೊಡಗರಹಳ್ಳಿ ಹಾಗೂ ಬೆಟ್ಟಗೇರಿ ಎಫ್.ಸಿ. ಸುಂಟಿಕೊಪ್ಪ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿರುವ ಪುಟ್ಬಾಲ್ ಪಂದ್ಯಾವಳಿಯ 8ನೇ ದಿನ ಮೊದಲನೇ ಪಂದ್ಯದಲ್ಲಿ ವಾಲ್‌ಪರಿ ಎಫ್.ಸಿ. ತಮಿಳುನಾಡು ತಂಡಕ್ಕೆ ವಾಕ್‌ಓವರ್‌ ಸಿಕ್ಕಿದೆ. ಈ ತಂಡಕ್ಕೆ ಇಕೆಎನ್ ಎಫ್.ಸಿ. ಕೋಳಿಕಡಾವು ಇರಿಟ್ಟಿ ಎದುರಾಳಿಯಾಗಿದ್ದು, ಇಕೆಎನ್ ಎಫ್.ಸಿ. ಬಾರದ ಹಿನ್ನೆಲೆ ವಾಕ್ ಓವರ್ ಮೂಲಕ ವಾಲ್‌ಪರಿ ಎಫ್.ಸಿ ಸೆಮಿಫೈನಲ್‌ ಪ್ರವೇಶಿಸಿತು.ದ್ವಿತೀಯ ಪಂದ್ಯ ಟ್ರೇಡಿಷನಲ್ ಟೂರಿಸಂ ಎಫ್.ಸಿ. ತಿರುಚಿ ಹಾಗೂ ಮಿಡ್‌ಸಿಟಿ ಸುಂಟಿಕೊಪ್ಪ ತಂಡಗಳ ನಡುವೆ ನಡೆಯಿತು. ಪಂದ್ಯದ ಮೊದಲಾರ್ಧದ ಸುಂಟಿಕೊಪ್ಪ ಮಿಡ್‌ಸಿಟಿ ತಂಡದ ಮುನ್ನಡೆ ಆಟಗಾರ ಪಾಂಡ್ಯನ್ 18ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು.ದ್ವಿತೀಯಾರ್ಧದ 8ನೇ ನಿಮಿಷದಲ್ಲಿ ಟ್ರೆಡಿಷನಲ್ ಟೂರಿಸಂ ಎಫ್.ಸಿ. ತಿರುಚಿ ತಂಡದ ಮುನ್ನಡೆ ಆಟಗಾರ ಕಿರಣ್ ಗೋಲುಗಳಿಸುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು. ಆದರೆ ಬಿರುಸಿನ ಆಟಕ್ಕೆ ಇಳಿದ ಮಿಡ್‌ಸಿಟಿ ತಂಡದ ಪರ ಶಬ್ಬೀರ್ 2 ಹಾಗೂ ದಿವಾಕರ ಮತ್ತು ವಿಜು ತಲಾ 1 ಗೋಲು ಸಿಡಿಸುವ ಮೂಲಕ ಬಾರಿಸುವ ಮೂಲಕ ತಂಡಕ್ಕೆ 5-1 ಗೋಲುಗಳ ಗೆಲುವು ತಂದುಕೊಟ್ಟರು. ಈ ಮೂಲಕ ಮಿಡ್‌ಸಿಟಿ ಸುಂಟಿಕೊಪ್ಪ ತಂಡವು ದ್ವಿತೀಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.ಮೂರನೇ ಪಂದ್ಯ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ಹಾಗೂ ಎನ್‌ವೈಸಿ ಕೊಡಗರಹಳ್ಳಿ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಸಮಬಲದ ಹೋರಾಟ ನಡೆಸಿತು. ಪರಿಣಾಮ ಇತ್ತಂಡಗಳಿಂದ ಯಾವುದೇ ಗೋಲುಗಳು ದಾಖಲಾಗಿಲ್ಲ. ಇದರಿಂ ಫಲಿತಾಂಶಕ್ಕಾಗಿ ಟೈಬ್ರೇಕರ್‌ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಎನ್‌ವೈಸಿ ಕೊಡಗರಹಳ್ಳಿ 4-2 ಅಂತರದಿಂದ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡವನ್ನು ಮಣಿಸಿ 3ನೇ ತಂಡವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿತು.

ನಾಲ್ಕನೇ ಪಂದ್ಯ ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ ಹಾಗೂ ಕ್ಯಾಲಿಕೆಟ್ ಎಫ್.ಸಿ. ಕ್ಯಾಲಿಕೆಟ್ ತಂಡಗಳ ನಡುವೆ ನಡೆಯಿತು. ಎರಡೂ ತಂಡಗಳು ಪ್ರಥಮಾರ್ಧದಲ್ಲಿ ಸಮಬಲದ ಪ್ರದರ್ಶನ ನೀಡಿತು. ಆದರೆ ಯಾವುದೇ ಗೋಲುಗಳು ದಾಖಲಾಗಿಲ್ಲ.

ದ್ವಿತೀಯಾರ್ಧದಲ್ಲಿ ಕ್ಯಾಲಿಕೆಟ್ ಎಫ್.ಸಿ. ಕ್ಯಾಲಿಕೆಟ್ ತಂಡದ ಆಟಗಾರ ಎಸಗಿದ ತಪ್ಪಿನಿಂದಾಗಿ ಬೆಟ್ಟಗೇರಿ ಎಫ್.ಸಿ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್‌ ದೊರೆಯಿತು. ಇದರ ಲಾಭವೆತ್ತಿದ ಮನೋಜ್, ಗೋಲುಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಲಭಿಸಿತು. ಪಂದ್ಯದ ಕೊನೆಯ ನಿಮಿಷದಲ್ಲಿ ಬೆಟ್ಟಗೇರಿ ತಂಡದ ಮಂಜು ಗೋಲು ಗಳಿಸುವ ಮೂಲಕ ಬೆಟ್ಟಗೇರಿ ತಂಡ 2-0 ಗೋಲುಗಳಿಂದ ಗೆದ್ದು 4ನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು.ಪಂದ್ಯಗಳನ್ನು ಸುಂಟಿಕೊಪ್ಪ ಟಿಂಬರ್ ವ್ಯಾಪಾರಿ ವಿಲಿಯಂ ಹಾಗೂ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಕೆ.ಮೋಹನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಹಿರಿಯ ಪುಟ್ಬಾಲ್ ಆಟಗಾರ ವಹೀದ್‌ಜಾನ್ ಉದ್ಘಾಟಿಸಿದರು.

ಈ ಸಂದರ್ಭ ಬ್ಲೂಬಾಯ್ಸ್ ಯುವಕ ಸಂಘ ಅಧ್ಯಕ್ಷ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ಯು.ಪ್ರಸನ್ನ, ಅನಿಲ್, ಹಮೀದ್ ಸೇರಿದಂತೆ ಮತ್ತಿತರರು ಇದ್ದರು.

ಇಂದಿನ ಪಂದ್ಯಮೊದಲ ಸೆಮಿಫೈನಲ್ ಮಧ್ಯಾಹ್ನ 3 ಗಂಟೆವಾಲ್‌ಪರಿ ಎಫ್.ಸಿ ತಮಿಳುನಾಡು - ಮಿಡ್‌ಸಿಟಿ ಸುಂಟಿಕೊಪ್ಪದ್ವಿತೀಯ ಸೆಮಿಫೈನಲ್ ಸಂಜೆ 4 ಗಂಟೆಎನ್‌ವೈಸಿ ಕೊಡಗರಹಳ್ಳಿ - ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ