ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧದಲ್ಲಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬನ ಚಿನ್ನಾಭರಣ-ನಗದು ಕಳ್ಳತನವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ವಿಧಾನಸೌಧ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಬಂಗಾರಪೇಟೆ ಮೂಲದ ಆರ್‌.ನವೀನ್‌ ಚಿನ್ನಾಭರಣ-ನಗದು ಕಳೆದುಕೊಂಡವರು. ಗ್ರೂಪ್‌ ಡಿ ನೌಕರ ಆಂಥೋನಿ ಬಂಧಿತ ಆರೋಪಿ. ಆರೋಪಿಯಿಂದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆ.2 ರ ಸಂಜೆ 5.15ರ ವೇಳೆ ಈ ಘಟನೆ ನಡೆದಿತ್ತು. ಸುಮಾರು 34 ಲಕ್ಷ ರು. ಮೌಲ್ಯದ 200 ಗ್ರಾಂ. ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಸುಮಾರು 1.10 ಲಕ್ಷ ನಗದು ಇದ್ದ ಬ್ಯಾಗ್‌ ಅನ್ನು ನವೀನ್‌ ಎಂಬುವರು ವಿಧಾನಸೌಧದ 316 (ಎ) ಕಚೇರಿಯಲ್ಲಿ ಮರೆತು ಹೋಗಿದ್ದರು. ಬಳಿಕ ಆ ಬ್ಯಾಗ್‌ ಅನ್ನು ಡಿ ಗ್ರೂಪ್‌ ನೌಕರ ಆಂಥೋನಿ ತೆಗೆದುಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದಲ್ಲಿ ಆತನನ್ನು ಬಂಧಿಸಿ ನಗದು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ:


ಕೋಲಾರದ ಬಂಗಾರಪೇಟೆಯ ನವೀನ್‌ ಅವರಿಗೆ ಜಮೀನಿನ ವಿವಾದ ಇದ್ದ ಹಿನ್ನೆಲೆಯಲ್ಲಿ ಫೆ.5 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತಕ್ಕೆ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಚಿವ ಬೈರತಿ ಸುರೇಶ್‌ ಅವರಿಗೆ ದೂರು ನೀಡಲು ಬಂದಿದ್ದರು. ಈ ವೇಳೆ ಅವರು ತಂದಿದ್ದ ಚಿನ್ನಾಭರಣ ಮತ್ತು ಹಣವುಳ್ಳ ಬ್ಯಾಗ್ ಅನ್ನು ಸಚಿವರ ಕೊಠಡಿಯಲ್ಲಿ ಮರೆತು ಹೋಗಿದ್ದರು.

ಲ್ಯಾಪ್‌ಟಾಪ್ ಬ್ಯಾಗ್‌ನಲ್ಲಿ ಮೆಡಿಕಲ್ ರೆಕಾರ್ಡ್ಸ್, ರೆವೆನ್ಯೂ ರೆಕಾರ್ಡ್ಸ್, ಬ್ಯಾಂಕ್ ರೆಕಾರ್ಡ್ ಮತ್ತು ಇತರ ಖಾಸಗಿ ದಾಖಲಾತಿಗಳು ಹಾಗೂ ಆಭರಣ ನಗದು ಇದ್ದವು. ನಂತರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಹೋದ ಬಳಿಕ ರಾತ್ರಿ ಸುಮಾರು 9.40 ರ ವೇಳೆ ಬ್ಯಾಗ್‌ ನೆನಪಾಗಿ ಅದನ್ನು ವಾಪಸ್ ತೆಗೆದುಕೊಳ್ಳಲು ಹೋದಾಗ ಕೊಠಡಿಗೆ ಬೀಗ ಹಾಕಿದ್ದು, ಈ ಬಗ್ಗೆ ನವೀನ್‌ ಸಿಬ್ಬಂದಿಯನ್ನು ವಿಚಾರಿಸಿದಾಗ ಮರುದಿನ ಬೆಳಗ್ಗೆ ಬರುವಂತೆ ಸಲಹೆ ನೀಡಿದ್ದರು.

ಬಳಿಕ ಫೆ.5ರಂದು ಮಧ್ಯಾಹ್ನ 1.30ಕ್ಕೆ ಹೋಗಿ ಬ್ಯಾಗ್ ಬಗ್ಗೆ ವಿಚಾರಿಸಿದ್ದ ಕಚೇರಿಯಲ್ಲಿದ್ದ ಮೂವರು ಸಿಬ್ಬಂದಿ ನಿಮ್ಮನ್ನು ಯಾರು ಬ್ಯಾಗ್ ಇಲ್ಲಿ ಇಡಲು ಹೇಳಿದರು ಎಂದು ಕೂಗಾಡಿದ್ದರು. ನಂತರ ಅಲ್ಲಿದ್ದ ಗ್ರೂಪ್ ಡಿ ನೌಕರ ಕೀರ್ತಿ ಎಂಬಾತ ತಾನು ರಾತ್ರಿ ಆ ಬ್ಯಾಗ್‌ ಅನ್ನು ತೆಗೆದು ಕೊಠಡಿ ಹೊರಗೆ ಕಿಟಕಿಯಲ್ಲಿ ಇಟ್ಟಿದ್ದಾಗಿ ತಿಳಿಸಿದ್ದ. ಸಂಜೆ 4.30ಕ್ಕೆ ಸಿಬ್ಬಂದಿ ನವೀನ್‌ಗೆ ಕರೆ ಮಾಡಿ ನಿಮ್ಮ ಬ್ಯಾಗ್ ದೊರಕಿರುವುದಾಗಿ ಹೇಳಿದ್ದರು. ಆದರೆ ಬ್ಯಾಗ್‌ನಲಿದ್ದ ಚಿನ್ನ ಮತ್ತು ಬೆಳ್ಳಿ ನಗದು ಕಳುವಾಗಿತ್ತು. ಈ ಸಂಬಂಧ ಫೆ.7 ರಂದು ನವೀನ್‌ ದೂರು ನೀಡಿದ್ದರು.

-ಬಾಕ್ಸ್‌-

ವಿಧಾನಸೌಧದೊಳಗೆ

ಚಿನ್ನ-ಹಣ ಹೇಗೆ ಬಂತು?

ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ವಿಧಾನಸೌಧದೊಳಗೆ ಇಷ್ಟೊಂದು ಚಿನ್ನಾಭರಣ, ನಗದು ಹೇಗೆ ಬಂತು ಎಂಬುದು ಯಕ್ಷ ಪ್ರಶ್ನೆ. ಯಾವ ಕಾರಣಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತದ ಚಿನ್ನಾಭರಣ, ನಗದು ತರಲಾಗಿತ್ತು ಎಂಬುದೂ ನಿಗೂಢವಾಗಿದೆ. ಪೊಲೀಸರು ನವೀನ್‌ ಅವರನ್ನು ಸರಿಯಾಗಿ ತಪಾಸಣೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ನವೀನ್‌ ಅವರಿಗೆ ಕಾಲಿನ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಹೆಚ್ಚಿನ ತಪಾಸಣೆ ನಡೆಸಿದೆ ಒಳಗೆ ಕಳುಹಿಸಿದ್ದಾರೆ ಎನ್ನಲಾಗಿದೆ.