ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಕಾಕನೂರು ಗ್ರಾಮದ ಹೊರವಲದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಳಿ ಇರುವ ಮಾದಪ್ಪ ಎಂಬುವರ ತೋಟದ ಮನೆಗೆ 5 ಜನ ದರೋಡೆಕೋರ ತಂಡ ಮನೆಗೆ ನುಗ್ಗಿ ವಯೋವೃದ್ಧ ದಂಪತಿ ಸಾವಿತ್ರಮ್ಮ, ಮಾದಪ್ಪ ಎಂಬುವರಿಗೆ ಥಳಿಸಿ 8.85 ಲಕ್ಷ ರುಪಾಯಿ ಬೆಲೆ ಬಾಳುವ ಬೆಳ್ಳಿ-ಬಂಗಾರದ ಆಭರಣಗಳನ್ನು ದೋಚಿದ ಘಟನೆ ಶನಿವಾರ ರಾತ್ರಿ ನಡೆದಿದೆ.ಹೊರಗಡೆ ಹೋಗಿದ್ದ ಪುತ್ರ ವಿಕಾಸ, ಅಳಿಯ ಸಂತೋಷ ಮನೆಗೆ ಬಂದಾಗ ರೂಮಿನ ಬಾಗಿಲನ್ನು ತೆರೆದರು. ಆಗ ನಡೆದ ಎಲ್ಲಾ ವಿಚಾರವನ್ನು ತಿಳಿಸಿದ್ದಾಗಿ ಸಾವಿತ್ರಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದರೋಡೆಯ ವಿಷಯವನ್ನು ತಮ್ಮ ಮಗ ಸಂತೆಬೆನ್ನೂರು ಪೊಲೀಸರಿಗೆ ದೂರವಾಣಿಯ ಮೂಲಕ ವಿಷಯ ತಿಳಿಸಿದಾಗ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ದರೋಡೆ ಮಾಡಿಕೊಂಡ ಹೋದ ಎಲ್ಲರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು. ಕಂದು ಮೈ ಬಣ್ಣ ಹೊಂದಿದ್ದು, ದೃಢಕಾಯ ಮೈಕಟ್ಟಿನವರಾಗಿದ್ದರು. ಈ ಬಗ್ಗೆ ಸಂತೆಬೆನ್ನೂರು ಗ್ರಾಮದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ದೂರು ನೀಡದ್ದೇವೆ ಎಂದು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿ.ವೈ.ಎಸ್.ಪಿ.ಸ್ಯಾಮ್ ವರ್ಗಿಸ್, ಸಂತೆಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರಗಳನ್ನು ಪಡೆದಿದ್ದಾರೆ.
ದರೋಡೆ ನಡೆದ ಮನೆಯ ಬಳಿ ಶ್ವಾನ ದಳದಿಂದ ಪರಿಶೀಲನೆ ನಡೆಸಿದ್ದು ಆರೋಪಿತರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಪ್ರಕರಣ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಏನಿದು ಘಟನೆ?
ಸಾವಿತ್ರಮ್ಮ-ಮಾದಪ್ಪ ದಂಪತಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದು ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ, ಎರಡನೇ ಮಗ ವಿಕಾಸ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಈ ವೃದ್ಧ ದಂಪತಿ ಮನೆಯ ಬಾಗಿಲನ್ನು ತೆಗೆದುಕೊಂಡು ಟಿವಿ ನೋಡುತ್ತಿದ್ದರು. ಐದು ಜನರಿದ್ದ ದರೋಡೆಕೋರರ ಗುಂಪು ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಕಾಲಿಗೆ ಸಾಕ್ಸ್ ಹಾಕಿಕೊಂಡಿತ್ತು. ಇದರಲ್ಲಿ ಒಬ್ಬ ಕೈಯಲ್ಲಿ ದೊಡ್ಡ ಕೋಲು ಹಿಡಿದಿದ್ದ. ಮನೆಯ ಬಾಗಿಲ ಮುಂದೆ ನಿಂತಿದ್ದ ಉಳಿದ ನಾಲ್ಕು ಜನರು ಮನೆಯೊಳಗೆ ನುಗ್ಗಿ ಕೈಯಲ್ಲಿ ಚಾಕು ಹಿಡಿದು ಬಂದು ಮಾದಪ್ಪ ಪಂಚೆ ಹರಿದು ಅದರಿಂದಲೇ ಕೈ-ಕಾಲು, ಬಾಯಿ ಕಟ್ಟಿ ಸಾವತ್ರಮ್ಮರನ್ನು ಹಗ್ಗದಿಂದ ಅವರ ಕೈ-ಕಾಲುಗಳನ್ನು ಕಟ್ಟಿ ಹಾಕಿದರು.ಅವರ ಕೊರಳಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೈಯಲ್ಲಿದ್ದ 5 ಗ್ರಾಂ ಉಂಗುರ, ಕಿವಿಯಲ್ಲಿದ್ದ ಓಲೆಯನ್ನು ಬಿಚ್ಚಿಕೊಂಡು ಬೀರುವಿನ ಬೀಗ ನೀಡುವಂತೆ ಹಿಂಸಿಸಿದ್ದಾರೆ. ನಂತರ ರೂಮಿನಲ್ಲಿ ಹುಡುಕಾಡಿ ಡ್ರಾದಲ್ಲಿ ಇದ್ದ ಬೀಗ ತೆಗೆದುಕೊಂಡು ಬೀರುಬಾಗಿಲನ್ನು ತೆಗೆದು ಅದರಲ್ಲಿದ್ದ 8 ಗ್ರಾಂ ಚಿನ್ನದ ಸರ, 4 ಗ್ರಾಂನ ಎರಡು ಉಂಗುರ, 4 ಗ್ರಾಂನ 5 ಜೊತೆ ಕಿವಿ ಓಲೆ, 4 ಗ್ರಾಂನ 2 ಜೊತೆ ದೇವರ ಕಿವಿ ಓಲೆ, ಎರಡು ಮೂಗುತಿ, ಬೆಳ್ಳಿಯ ಎರಡು ದೇವರ ಮುಖವಾಡಗಳು, ಎರಡು ದೀಪ, ಒಂದು ತಟ್ಟೆ, ಈಶ್ವರ, ಬಸವಣ್ಣ, ಗಣಪತಿಯ ವಿಗ್ರಹಗಳು, ಎರಡು ಕರಡಿಗೆ, ಎರಡು ಕಾಲುಂಗುರ ಸೇರಿ ಎಲ್ಲಾ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳನ್ನು ತೆಗೆದುಕೊಂಡು ಮನೆಯಲ್ಲಿಯೇ ಇದ್ದ ಬ್ಯಾಗಿನಲ್ಲಿ ಹಾಕಿಕೊಂಡು ದಂಪತಿಯನ್ನು ರೂಮಿನಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾರೆ.