ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸುಮಾರು ₹5 ಕೋಟಿ ಮೌಲ್ಯದ 3.3 ಕೆ.ಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಐಎಎಲ್‌ನ ಟರ್ಮಿನಲ್ -2 ರ ಮೂಲಕ ಅಂತರಾಷ್ಟ್ರೀಯ ಮಟ್ಟದ ಕಳ್ಳಸಾಗಣೆಯ ಗ್ಯಾಂಗ್‌ ಚಿನ್ನವನ್ನು ಕಳ್ಳಸಾಗಣೆ ಮಾಡಲು ಮುಂದಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು ಐವರು ಆರೋಪಿಗಳನ್ನು ಬಲೆಗೆ ಕೆಡವಿದ್ದು, ₹5 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಹಾಗೂ ಕ್ಯಾಪ್ಸುಲ್ ಆಕಾರದ ಪ್ಯಾಕೆಟ್‌ಗಳಲ್ಲಿ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ಬಾಂಗ್ಲಾದೇಶದ ಪ್ರಜೆಗಳು ಸ್ಥಳೀಯರ ಸಹಕಾರದೊಂದಿಗೆ ಚಿನ್ನ ಕಳ್ಳಸಾಗಣೆ ಮಾಡಲು ಮುಂದಾಗಿದ್ದರು. ಅದರಂತೆ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ದೇಹದ ವಿವಿಧ ಅಂಗಗಳಲ್ಲಿ ಮರೆಮಾಚಿಕೊಂಡು ಶೌಚಾಲಯಗಳು ಮತ್ತು ಧೂಮಪಾನ ವಲಯಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಪಾಸ್‌ಕೋಡ್ ಬಳಸಿಕೊಂಡು ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನವನ್ನು ವರ್ಗಾಯಿಸಲು ಮುಂದಾಗಿದ್ದರು.

ಪ್ರಾಥಮಿಕ ತನಿಖೆಯ ವೇಳೆ ಗಡಿಯಾಚೆಗಿನ ಕಳ್ಳಸಾಗಣೆಯ ಸಿಂಡಿಕೇಟ್‌ನ ಭಾಗವಾಗಿದೆ ಎಂದು ಕಂಡು ಬಂದಿದೆ. ಇದರಲ್ಲಿ ವಿದೇಶಿಯರು-ಬಾಂಗ್ಲಾದೇಶಿ ಪ್ರಜೆಗಳು ಇರುವ ಶಂಕೆ ಇದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಪ್ರಮುಖ ಕಿಂಗ್‌ಪಿನ್‌ಗಳು ಹಾಗೂ ಈ ನೆಟ್‌ವರ್ಕ್ ಅನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದ ಕೆಲ ಸಿಬ್ಬಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಅವರನ್ನು ವಶಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪಾಸ್‌ಕೋಡ್‌ ಬಳಕೆ: ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಆರೋಪಿಗಳು ವಿಶೇಷ ಪಾಸ್‌ಕೋಡ್‌ಗಳನ್ನು ಬಳಸಿಕೊಂಡು ಸಂಪರ್ಕ ಸಾಧಿಸುತ್ತಿದ್ದರು. ಇನ್ನು ಸಂವಹನಕ್ಕಾಗಿ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಮತ್ತು ಡಿಸಪಿಯರ್ ಚಾಟ್‌ಗಳನ್ನೂ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.