ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನಕಲಿ ಆಭರಣಗಳಿಗೆ ಚಿನ್ನದ ಲೇಪನ ಹಚ್ಚಿ ವಂಚಿಸಿ ಮೋಸ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ನರಸಿಂಹರಾಜಪುರ ಪೊಲೀಸರು 6.75 ಲಕ್ಷ ರು. ಬೆಲೆಯ ಆಭರಣ ಹಾಗೂ ಹಣ ವಶ ಪಡಿಸಿಕೊಂಡಿದ್ದಾರೆ.ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಶರತ್ ರಾಜ್, ಮುತ್ತಿನಕೊಪ್ಪ ವಾಸಿ ಫರಾಜ್ ಬಂಧಿತ ಆರೋಪಿಗಳು.
ಚಿನ್ನದ ಲೇಪನ ಇರುವ 68 ಗ್ರಾಂ ತೂಕದ ಚಿನ್ನಾಭರಣಗಳನ್ನು ಮುತ್ತೂಟ್ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದರು. ನಂತರಅದನ್ನು ಬಿಡಿಸಿ ದಾವಣಗೆರೆ ಶ್ರೀನಿಧಿ ಗೋಲ್ಡ್ ಕಂಪನಿಗೆ 4.19 ಲಕ್ಷ ರು. ಗಳಿಗೆ ಮಾರಾಟ ಮಾಡಿದ್ದಾರೆ. ಗೋಲ್ಡ್ ಕಂಪನಿ ಯವರು ಚಿನ್ನ ಕರಗಿಸಿ ಗಟ್ಟಿ ಮಾಡಿ ನೋಡಿದಾಗ ಶೇ. 21 ಮಾತ್ರ ಚಿನ್ನವಿದ್ದು, ಉಳಿದಿದ್ದು ನಕಲಿ ಚಿನ್ನವೆಂದು ತಿಳಿದು ಬಂದಿದೆ.
ಈ ಆರೋಪಿಗಳೂ ಚಿನ್ನವೆಂದು ನಂಬಿಸಿ ಮೋಸ ಮಾಡಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗೋಲ್ಡ್ ಕಂಪನಿಯವರು ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಫರಾಜ್ ಹಾಗೂ ಶರತ್ ರಾಜ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಫೈನಾನ್ಸ್ ಹಾಗೂ ಗೋಲ್ಡ್ ಕಂಪನಿಗೆ ವಂಚಿಸಿ ಮೋಸ ಮಾಡಿರುವುದು ಪತ್ತೆಯಾಗಿದೆ.
ಆರೋಪಿ ಶರತ್ ರಾಜ್ ಬಳಿ ಇದ್ದ 60 ಸಾವಿರ ರು. ನಗದು ಹಾಗೂ 22.9 ಗ್ರಾಂ ಚಿನ್ನದ ಲೇಪನ ಇರುವ ಬ್ರಾಸ್ ಲೈಟ್, 26.3 ಗ್ರಾಂ ಚಿನ್ನದ ಲೇಪನ ಇರುವ ಒಂದು ಲಕ್ಷ ರು. ಬೆಲೆಯ ಚೈನ್ ವಶಪಡಿಸಿಕೊಳ್ಳಲಾಗಿದೆ.ನ.ರಾ ಪುರ ಪಟ್ಟಣದ ವೆಂಕಟೇಶ್ವರ ಜ್ಯೂವೆಲ್ಲರ್ಸ್ ಹಾಗೂ ಪಾನ್ ಬೋಕರ್ಸ್ ನಲ್ಲಿ ಗಿರವಿ ಇಟ್ಟಿದ್ದ 32 ಗ್ರಾಂ ತೂಕದ ಚಿನ್ನದ ಲೇಪನ ಇರುವ 70 ಸಾವಿರ ಬೆಲೆಯ ಚೈನ್ ದೊರಕಿದೆ.
ಚಿಕ್ಕಮಗಳೂರು ನಗರದ ಕೋಶಮಟ್ಟಂ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದ 35 ಗ್ರಾಂ ಚಿನ್ನದ ಲೇಪನ ಇರುವ ಚೈನ್ ಹಾಗೂ 25 ಗ್ರಾಂ ಚಿನ್ನದ ಲೇಪನ ಇರುವ 2.50 ಲಕ್ಷ ರು.ಬೆಲೆಯ ಒಂದು ಕಡಗ ವಶಕ್ಕೆ ಪಡೆದಿದ್ದಾರೆ.ಆರೋಪಿ ಸ್ನೇಹಿತ ಸುರೇಶ್ ಹೆಸರಿನಲ್ಲಿ ಮಣಪುರಂ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದ ಚಿನ್ನದ ಲೇಪನ ಇರುವ ಒಟ್ಟು ಅಂದಾಜು ಬೆಲೆ 90 ಸಾವಿರ ರು. ಮೌಲ್ಯದ 34 ಗ್ರಾಂ ಚೈನ್ ಹಾಗೂ 29 ಗ್ರಾಂ ಬ್ರಾಸ್ ಲೈಟ್ ವಶಪಡಿಸಿಕೊಳ್ಳಲಾಗಿದೆ.
ಎನ್.ಆರ್. ಪುರ ಪೊಲೀಸ್ ಠಾಣಾ ಪಿಎಸ್ ಐ ನಿರಂಜನ್ ಗೌಡ, ಪಿಎಸ್‌ಐ ಜ್ಯೋತಿ, ಎಎಸ್‌ಐ ನಟರಾಜ್, ಸಿಬ್ಬಂದಿ ಬಸಂತ್ ಕುಮಾರ್, ಪರಮೇಶ್ ಹಾಗೂ ಶಂಕರ್, ಯುವರಾಜ್, ಕೌಶಿಕ್, ಗಿರೀಶ್ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದರು.1 ಕೆಸಿಕೆಎಂ 3
ಎನ್.ಆರ್.ಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಚಿನ್ನದ ಲೇಪನದ ಆಭರಣ ಹಾಗೂ ನಗದು ವಶಪಡಿಸಿಕೊಂಡಿರುವುದು.