ಸಾರಾಂಶ
ಡಿ.13ರಂದು ಹನುಮದ್ ವೃತ ಆಚರಣೆ ನಿಮಿತ್ತ ಮೂರು ದಿನಗಳ ಕಾಲ ಅನ್ನ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.
ಹನುಮಮಾಲೆ ಧರಿಸಿದ ಶಾಸಕ ಜನಾರ್ದನ ರೆಡ್ಡಿ
ಅಂಜನಾದ್ರಿ ಅಭಿವೃದ್ಧಿಗೆ ₹ 240 ಕೋಟಿ ಅನುದಾನಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದ ಗೋಪುರಕ್ಕೆ ಚಿನ್ನದ ಲೇಪನ ಮಾಡುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಸೋಮವಾರ ಪಂಪಾ ಸರೋವರದಲ್ಲಿ ಹನುಮಮಾಲೆ ಧರಿಸಿ ಅಂಜನಾದ್ರಿ ಬೆಟ್ಟದ ಕೆಳಗೆ ಆಂಜನೇಯಸ್ವಾಮಿ ಪಾದುಕೆಗಳಿಗೆ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಕ್ತರ ಸಹಕಾರ ಪಡೆದು ಗೋಪುರಕ್ಕೆ ಚಿನ್ನದ ಲೇಪ ಮಾಡುವುದಾಗಿ ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರ ₹ 100 ಕೋಟಿ, ಇಂದಿನ ಕಾಂಗ್ರೆಸ್ ಸರ್ಕಾರ ₹100 ಕೋಟಿ ಸೇರಿದಂತೆ ಅಂಜನಾದ್ರಿ ಅಭಿವೃದ್ದಿಗೆ ಒಟ್ಟು ₹240 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೋಠಡಿಗಳು, ರಸ್ತೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದರು.ಡಿ.13ರಂದು ಹನುಮದ್ ವೃತ ಆಚರಣೆ ನಿಮಿತ್ತ ಮೂರು ದಿನಗಳ ಕಾಲ ಅನ್ನ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಅಂಜನಾದ್ರಿ ಬೆಟ್ಟದ ಸುತ್ತಲು ದೀಪಗಳ ಅಲಂಕಾರ ಮಾಡಲಾಗುತ್ತಿದ್ದು, ಬೆಟ್ಟದ ನಾಲ್ಕು ಕಿಮೀ ದೂರ ಜೈ ಶ್ರೀರಾಮ, ಜೈ ಆಂಜನೇಯ ಶ್ಲೋಕ ಧ್ವನಿವರ್ಧಕ ಮೂಲಕ ಕೇಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ನನಗೆ ರಾಜಕೀಯ ಪುನರ್ ಜನ್ಮ ನೀಡಿದ್ದು, ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಯಾಗುತ್ತಿದೆ ಎಂದರು.
ಗಂಗಾವತಿ ರಾಣಾ ಪ್ರತಾಪ್ ವೃತ್ತದಿಂದ ಆನೆಗೊಂದಿಯವರೆಗೂ ರಸ್ತೆ ನಿರ್ಮಾಣವಾಗಲಿದೆ. ಜೊತೆಗೆ ವಿದ್ಯುತ್ ಕಂಬ ಅಳವಡಿಸಲಾಗುತ್ತಿದೆ ಎಂದರು.