ಸಾರಾಂಶ
ಕೋಟ್ಯಂತರ ರುಪಾಯಿ ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮದ ದಂಧೆಕೋರನಿಗೆ ಸನ್ಮಾನಿಸಿ ಟೀಕೆಗೊಳಗಾಗಿದ್ದ ಸುರಪುರ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಂದಾರ್ ಹೆಸರನ್ನು 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡಿರುವುದು ಅಚ್ಚರಿ ಹಾಗೂ ವ್ಯಾಪಕ ಆಕ್ಷೇಪಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಪ್ತಿ ಮಾಡಿದ್ದ 4.9 ಕೆ.ಜಿ.ಚಿನ್ನ ಕಳವು ಪ್ರಕರಣ ಆರೋಪ ಹೊತ್ತ, ಕೋಟ್ಯಂತರ ರುಪಾಯಿ ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮದ ದಂಧೆಕೋರನಿಗೆ ಸನ್ಮಾನಿಸಿ ಟೀಕೆಗೊಳಗಾಗಿದ್ದ ಸುರಪುರ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಂದಾರ್ ಹೆಸರನ್ನು 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡಿರುವುದು ಅಚ್ಚರಿ ಹಾಗೂ ವ್ಯಾಪಕ ಆಕ್ಷೇಪಕ್ಕೆ ಕಾರಣವಾಗಿದೆ. ಇದರ ವಿರುದ್ಧ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಮುಖ್ಯಮಂತ್ರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಆಗಿರುವ ಡಿವೈಎಸ್ಪಿ ಹೆಸರನ್ನು ಮರು ಪರಿಶೀಲಿಸಬೇಕು. ಅನೇಕ ಆರೋಪಗಳಿದ್ದರೂ ಮರೆಮಾಚಿ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡಿರುವ ಮೇಲಧಿಕಾರಿಗಳ ಕ್ರಮದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಕಂದಕೂರು, ಕಳಂಕಿತರಿಗೆ ಸಿಎಂ ಪದಕ ನೀಡಿದರೆ ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಿದಂತಾಗುತ್ತದಂತೆ ಎಂದೂ ಸಿಎಂಗೆ ಬರೆದ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಯಾದಗಿರಿ ಜಿಲ್ಲೆ ಸುರಪುರದಲ್ಲಿ 2 ಕೋಟಿ ರು.ಗಳಿಗೂ ಹೆಚ್ಚಿನ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಬೇಕಾಗಿದ್ದ ಡಿವೈಎಸ್ಪಿ ಇನಾಂದಾರ್, ಅಕ್ರಮದ ಆರೋಪಿ ಮಲ್ಲಿಕ್ ಎಂಬಾತನಿಗೆ ಸನ್ಮಾನಿಸಿದ್ದರು. ಈ ಕುರಿತು "ಕನ್ನಡಪ್ರಭ " ಡಿ.4 ರಂದು ವಿಶೇಷ ವರದಿಯನ್ನೂ ಪ್ರಕಟಿಸಿತ್ತು. ಬೆಳಗಾವಿ ಅಧಿವೇಶನದಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು.ಇನ್ನು 2021ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜಪ್ತಿ ಮಾಡಲಾಗಿದ್ದ 4.9 ಕೆ.ಜಿ. ಚಿನ್ನ ದಾಸ್ತಾನು ಕಳವು ಪ್ರಕರಣದಲ್ಲೂ ಜಾವೀದ್ ಸೇರಿ ಹಲವರ ವಿರುದ್ಧ ಆರೋಪ ಕೇಳಿ ಬಂದಿದ್ದರಿಂದ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಈಗಲೂ ಆ ತನಿಖೆ ಮುಂದುವರಿದಿದೆ.
ಯಾದಗಿರಿ ಜಿಲ್ಲೆ ಸುರಪುರ ಉಪವಿಭಾಗದ ಡಿವೈಎಸ್ಪಿ ಜಾವೀದ್ ಇನಾಂದಾರ್ ಪಡಿತರ ಅಕ್ಕಿ ಅಕ್ರಮ ಆರೋಪಿ ಸನ್ಮಾನಿಸಿ ಟೀಕೆಗೆ ಗುರಿಯಾಗಿದ್ದ ಅಧಿಕಾರಿ