ಗನ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನ ದರೋಡೆ

| Published : Jul 12 2025, 12:32 AM IST

ಸಾರಾಂಶ

Gold worth crores robbed at gunpoint

-ಹಾಡಹಗಲೇ ಸರಾಫ್ ಬಜಾರ್ ಚಿನ್ನದಂಗಡಿಗೆ ನುಗ್ಗಿದ ದರೋಡೆಕೋರರು

-ಅಂಗಡಿ ಮಾಲೀಕನ ಕೈಕಾಲು ಕಟ್ಟಿ, ಗನ್ ತೋರಿಸಿ 2.5 ಕೆ.ಜಿ ಚಿನ್ನ ದರೋಡೆ

-ಪೊಲೀಸ್ ಕಮಿಷನರ್ ಡಾ. ಶರಣಪ್ಪ ಭೇಟಿ, ದರೋಡೆಕೋರರ ಪತ್ತೆಗೆ ತಂಡ ರಚನೆ

-----

ಕನ್ನಡಪ್ರಭ ವಾರ್ತೆ ಕಲಬುರಗಿ

ಇತ್ತೀಚೆಗಷ್ಟೆ, ಬೀದರ್ ನಗರದಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಹತ್ಯೆ ಮಾಡಿ, ಹಣ ದರೋಡೆ ಮಾಡಿರುವ ಪ್ರಕರಣ ಬೆಚ್ಚಿಬಿಳಿಸಿತ್ತು. ಆ ಪ್ರಕರಣ ಮಾಸುವ ಮುನ್ನವೆ ಕಲಬುರಗಿಯಲ್ಲೊಂದು ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ.

ಹಾಡಹಗಲೇ ಮಟಮಟ ಮಧ್ಯಾಹ್ನವೇ ನಗರದ ಮಧ್ಯಭಾಗ ಹಾಗೂ ಜನನಿಬಿಡವಾದ ಪ್ರದೇಶವಾದ ಸರಾಫ್‌ ಬಜಾರ ನಲ್ಲಿರುವ ಮಾಲೀಕ್ ಎಂಬ ಚಿನ್ನದ ಅಂಗಡಿಗೆ ನುಗ್ಗಿದ ನಾಲ್ವರು ಮುಸುಕು ಧಾರಿ ದರೋಡೆಕೋರರು ಚಿನ್ನದ ಅಂಗಡಿಯ ಮಾಲೀಕನ ಕೈಕಾಲುಗಳನ್ನು ಕಟ್ಟಿ ಹಾಕಿ, ಗನ್ ತೋರಿಸಿ, ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ 2.5 ಕೆ.ಜಿ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಶುಕ್ರವಾರ ಬೆಳಗ್ಗೆ 12 ರ ಸುಮಾರಿಗೆ ನಾಲ್ಕು ಜನ ಮುಸುಕಧಾರಿಗಳು ಮೊದಲನೆ ಮಹಡಿಯಲ್ಲಿರುವ ಮಾಲೀಕ್ ಚಿನ್ನದ ಅಂಗಡಿಗೆ ಹೋಗಿದ್ದಾರೆ. ಆಗ ಅಂಗಡಿಯಲ್ಲಿ ಮಾಲೀಕ ಮಾತ್ರ ಇದ್ದ ಎನ್ನಲಾಗಿದೆ. ನೇರವಾಗಿ ಚಿನ್ನದ ಅಂಗಡಿಗೆ ನುಗ್ಗಿದ ದರೋಡೆಕೋರರು, ಮೊದಲು ಮಾಲೀಕನ ಕೈಕಾಲು ಕಟ್ಟಿದ್ದಾರೆ. ನಂತರ ಆತನ ತಲೆಗೆ ಗನ್ ಇಟ್ಟು ಲಾಕರ್ ನಲ್ಲಿರುವ ಚಿನ್ನಾಭರಣವನ್ನೆಲ್ಲವನ್ನು ತೆಗೆದಕೊಂಡು ಪರಾರಿಯಾಗಿದ್ದಾರೆ. ಇಬ್ಬರು ಮುಸುಕುಧಾರಿಗಳು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಕಮೀಷನರ್ ಡಾ. ಶರಣಪ್ಪ, ಡಿಸಿಪಿ ಕನೀಕಾ ಸಿಕ್ರೆವಾಲ್, ಎಸಿಪಿ, ಪಿಐ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನನೀಬಿಡ ಪ್ರದೇಶವಾಗಿರುವ ಸರಾಫ್ ಬಜಾರ್ ನಲ್ಲಿ ಈ ರೀತಿ ಹಾಡಹಗಲೇ ಸಿನಿಮಿಯ ರೀತಿಯಲ್ಲಿ ಭಯಾನಕ ದರೋಡೆ ನಡೆದಿದ್ದು, ಸಾರ್ವಜನಿಕರು ಹಾಗೂ ಚಿನ್ನದಂಗಡಿ ಮಾಲೀಕರನ್ನು ಬೆಚ್ಚಿಬಿಳಿಸುವಂತೆ ಮಾಡಿದೆ.

..ಬಾಕ್ಸ.....

ನಾಲ್ಕು ಜನರ ತಂಡ ಬಂದು ದರೋಡೆ ಮಾಡಿದ್ದಾರೆ. ಮಾಲೀಕನ ತಲೆಗೆ ಗನ್ ಹಿಡಿದು 2.5 ಕೆಜಿ ಚಿನ್ಙಾಭರಣ ದರೋಡೆ ಮಾಡಿದ್ದಾರೆ. ಅಂಗಡಿಯಲ್ಲಿ ಒಬ್ಬನೇ ಇದ್ದಾಗ ದರೋಡೆ ನಡೆದಿದೆ ಎಂದು ಮಾಲೀಕ ಹೇಳಿದ್ದಾರೆ. ದರೋಡೆಕೋರರ ಪತ್ತೆಗೆ ಐದು ತಂಡ ರಚನೆ ಮಾಡಿದ್ದು. ಆದಷ್ಟು ಬೇಗ ದರೋಡೆಕೋರರ ಬಂಧನ ಮಾಡುತ್ತೇವೆ.

-ಡಾ. ಶರಣಪ್ಪ, ನಗರ ಪೊಲೀಸ್ ಕಮಿಷನರ್, ಕಲಬುರಗಿ

---

..ಬಾಕ್ಸ್....

ದರೋಡೆಯಾದ ಬಳಿಕ ಅಂಗಡಿ ಮಾಲೀಕ ಕಿರುಚಿಕೊಂಡ್ರು. ಅದನ್ನ ಕೇಳಿ ನಾನು ಓಡಿ ಹೋಗಿ ಅವರನ್ನ ನೋಡಿದೆ. ಜುವೆಲರಿ ಮಾಲೀಕನ ಕೈಕಾಲು ಕಟ್ಟಿದ್ದರು. ಬಾಯಿಗೆ ಸೆಲ್ಲೋ ಟೇಪ್ ಹಾಗೂ ಕೈಕಾಲು ಕಟ್ಟಿದ್ದರು. ಅವರು ಗಾಬರಿಯಿಂದ ಶಟರ್ ಓಪನ್ ಮಾಡಿದ್ದರು. ನಾನು ಓಡಿ ಹೋಗವಷ್ಟರಲ್ಲಿ ದರೋಡೆ ಕೋರರು ಏಸ್ಕೇಪ್ ಆದ್ರು. ಹಾಡಹಗಲೇ ಈ ರೀತಿಯಾಗಿದ್ದು ಭಾರಿ ಭಯ ಮೂಡಿಸಿದೆ. ನಮಗಂತೂ ಸಾಕಷ್ಟು ಆತಂಕವಾಗಿದೆ. ಪ್ರತಿನಿತ್ಯ ಇಲ್ಲೆ ಇರುತ್ತಿದ್ದೆವು, ಇಲ್ಲಿಯವರೆಗೂ ಈ ರೀತಿ ಆಗಿರಲಿಲ್ಲ. ಆದ್ರೆ ಇದೇ ಮೊದಲ ಭಾರಿಗೆ ಗನ್ ಹಿಡಿದು ರಾಬರಿ ಮಾಡಿದ್ದಾರೆ.

- ರಾಜಶೇಖರ್, ಪ್ರತ್ಯಕ್ಷದರ್ಶಿ