ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಳೆದ 50 ವರ್ಷಗಳ ಹಿಂದೆ ದೇಶದ ಎಲ್ಲೆಡೆ ಕೆವಿಕೆಗಳ ಸ್ಥಾಪನೆಯಿಂದಾಗಿ ರೈತರಿಗೆ ತಂತ್ರಜ್ಞಾನ ಸುಲಭವಾಗಿ ದೊರಕುವಂತಾಯಿತು ಎಂದು ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ.ದೊರೆಸ್ವಾಮಿ ತಿಳಿಸಿದರು.ಹರದನಹಳ್ಳಿ ಫಾರಂ ಕೆವಿಕೆಯಲ್ಲಿ ಬುಧವಾರ ಏರ್ಪಡಿಸಿದ್ದ ಕೃಷಿ ವಿಜ್ಞಾನ ಕೇಂದ್ರಗಳ ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ದೇಶದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಸ್ಥಾಪನೆಗೊಂಡು, ಬೆಳವಣಿಗೆಗೊಂಡು ಅಭಿವೃದ್ಧಿ ಹೊಂದಿದ ಬಗ್ಗೆ ತಿಳಿಸಿಕೊಟ್ಟು ಹರದನಹಳ್ಳಿ ಕೆವಿಕೆಗೆ ಎರಡು ದಶಕಗಳು ತುಂಬಿದ್ದು ಜಿಲ್ಲೆಯಲ್ಲಿ ಕೇಂದ್ರದ ಕಾರ್ಯವೈಖರಿ ಬಹಳ ವಿಸ್ತರಣೆಗೊಂಡಿದೆ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ಡಾ.ಸುಷ್ಮಾ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಕೈಗೊಂಡಿರುವ ಕೃಷಿ ಪೂರಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಕೃಷಿ ತಂತ್ರಜ್ಞಾನಗಳ ಅಳವಡಿಕೆಗೆ ಕರೆ ನೀಡಿದರು.ನಬಾರ್ಡ್ ವ್ಯವಸ್ಧಾಪಕಿ ಹಿತ ಸುವರ್ಣಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ ಚಾಮರಾಜನಗರದ ರೈತಪರ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಜಿಲ್ಲೆಯ ಕೃಷಿ ಪೂರಕ ಅಭಿವೃದ್ಧಿ ಕಾರ್ಯಗಳಿಗೆ ನಬಾರ್ಡ್ ಸದಾ ಸಹಕಾರಿಯಾಗಿರುತ್ತದೆ ಎಂದರು. ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಯೋಗೇಶ್,ಜಿ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಗಳ ಕಾರ್ಯವೈಖರಿಯಲ್ಲಿ ಉಂಟಾಗಿರುವ ಸಮಯೋಚಿತ ಬದಲಾವಣೆಗಳ ಬಗ್ಗೆ ತಿಳಿಸಿ ರೈತರು ಇವುಗಳಿಗೆ ಉತ್ತಮ ಸ್ಪಂದನೆ ನೀಡುತ್ತಾ ಬಂದಿರುತ್ತಾರೆ. ಪ್ರಸ್ತುತ ಕೃಷಿ ನವೋದ್ಯಗಳು ಹಾಗೂ ಕೃಷಿ ಪೂರಕ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ಇದ್ದು ರೈತಾಪಿ ವರ್ಗದವರು ದ್ವಿತೀಯ ಕೃಷಿಗೆ ಒತ್ತು ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಅಂತಿಮ ವರ್ಷದ ವಿದ್ಯಾರ್ಥಿ ಕುಮಾರ ಆದರ್ಶ್ ಪ್ರಸ್ತುತಪಡಿಸಿದರು, ಕು. ವೀಣಾ ಮತ್ತು ಕುಮಾರಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು, ಕುಮಾರಿ ಅಶ್ವಿನಿ ಸ್ವಾಗತಿಸಿದರು. ಕು. ಪ್ರಗತಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರಕಾಶ್, ಡಾ.ನಾಗೇಶ, ಪ್ರಗತಿಪರ ರೈತರಾದ ನಂಜೇದೇವಪುರದ ದೇವಣ್ಣ, ನಾಗೇಂದ್ರ ಸ್ವಾಮಿ, ಚಿನ್ನಸ್ವಾಮಿ, ಪ್ರಗತಿಪರ ಸಾವಯವ ಕೃಷಿಕ ದೊಡ್ಡತುಪ್ಪೂರು ಶಶಿಕುಮಾರ್ ಮತ್ತು ಇತರ ರೈತರು ಹಾಗೂ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಸುವರ್ಣ ಜ್ಯೋತಿ ಸಂಚಾರ
ಸುವರ್ಣ ಜ್ಯೋತಿ ಕೃಷಿ ವಿಜ್ಞಾನ ಕೇಂದ್ರಗಳ ಸ್ವರ್ಣ ಜಯಂತಿ ಮಹೋತ್ಸವವನ್ನು ಹರದನಹಳ್ಳಿ ಫಾರಂ ಕೆವಿಕೆಯಲ್ಲಿ ಆಚರಿಸಲಾಯಿತು. ಸುವರ್ಣ ಜ್ಯೋತಿಯು ಬುಧವಾರ ಬೆಳಗ್ಗೆ ಸುತ್ತೂರಿನ ಜೆಎಸ್‌ಎಸ್ ಕೆವಿಕೆಯಿಂದ ಕೆವಿಕೆ ಚಾಮರಾಜನಗರಕ್ಕೆ ಬಂದು ಸೇರಿತು.
ಸುವರ್ಣ ಜ್ಯೋತಿಯನ್ನು ಕೆ.ವಿ.ಕೆ ಸಿಬ್ಬಂದಿ, ಕೃಷಿ ಮಹಾವಿದ್ಯಾಲಯದ ಸಿಬ್ಬಂದಿ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಡಾ.ಸುಷ್ಮಾ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹಿತ.ಜಿ.ಸುವರ್ಣ, ಪ್ರಗತಿಪರ ರೈತರು ಹಾಗೂ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ವೀಕರಿಸಲಾಯಿತು.ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ವಿಜ್ಞಾನ ಕೇಂದ್ರಗಳ ಸ್ವರ್ಣ ಮಹೋತ್ಸವವನ್ನು ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರಗಳ ಸಮ್ಮೇಳನದಲ್ಲಿ ಆಚರಿಸಲು ನಿರ್ಧರಿಸಿದ್ದು ಸ್ವರ್ಣ ಮಹೋತ್ಸವದ ಜ್ಯೋತಿಯು ರಾಷ್ಟ್ರದ ಎಲ್ಲಾ ಕೆವಿಕೆಗಳ ಮೂಲಕ ಸಂಚರಿಸುವುದು. ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರ, ರೈತ ಉತ್ಪಾದಕರ ಸಂಸ್ಥೆಗಳು ಹಾಗೂ ಕೃಷಿ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ತೊಡಗಿರುವ ರೈತರ ಕಿಸಾನ್ ಸಮೃದ್ಧಿ ಉತ್ಪನ್ನಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕೇಂದ್ರದಲ್ಲಿ ಲಭ್ಯವಿರುವ ತಾಂತ್ರಿಕ ಉತ್ಪನ್ನಗಳಾದ ಸುಧಾರಿತ ಬಿತ್ತನೆ ಬೀಜಗಳು, ಸಸಿಗಳು, ಸಂಸ್ಕರಿಸಿದ ಜೇನುತುಪ್ಪ, ರಾಗಿ ಮಾಲ್ಟ್, ಬೇವಿನ ಹಿಂಡಿ, ಹೊಂಗೆ ಹಿಂಡಿ ಬೇವಿನ ಎಣ್ಣೆ, ಜೈವಿಕ ಕೀಟ ಹಾಗೂ ರೋಗನಾಶಕಗಳಾದ ಮೆಟರೈಝಿಯಂ, ಪೆಸಿಲೋಮೈಸಿಸ್, ಟ್ರೈಕೊಡರ್ಮಾ, ಸುಡೋಮೊನಾಸ್ ಮತ್ತು ಬಾಳೆ ನಾರಿನ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.