ಬಯಲು ಸೀಮೆಯ ವಿಶಾಲ ಹುಲ್ಲುಗಾವಲುಗಳಲ್ಲಿ ಹಿಂಡುಹಿಂಡಾಗಿ ಓಡಾಡುವ ಕೃಷ್ಣಮೃಗಗಳು... ದೂರದಿಂದಲೇ ಎದ್ದು ಕಾಣುವ ಕಪ್ಪು-ಬಿಳಿ ಬಣ್ಣದ ಕೃಷ್ಣಮೃಗಗಳ ಸೊಬಗು... ಪ್ರಕೃತಿಯ ಮಡಿಲಿನ ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿರುವ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಇದೀಗ ತನ್ನ ಸುವರ್ಣ ಸಂಭ್ರಮದ ಪಯಣವನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಬಯಲು ಸೀಮೆಯ ವಿಶಾಲ ಹುಲ್ಲುಗಾವಲುಗಳಲ್ಲಿ ಹಿಂಡುಹಿಂಡಾಗಿ ಓಡಾಡುವ ಕೃಷ್ಣಮೃಗಗಳು... ದೂರದಿಂದಲೇ ಎದ್ದು ಕಾಣುವ ಕಪ್ಪು-ಬಿಳಿ ಬಣ್ಣದ ಕೃಷ್ಣಮೃಗಗಳ ಸೊಬಗು... ಪ್ರಕೃತಿಯ ಮಡಿಲಿನ ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿರುವ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಇದೀಗ ತನ್ನ ಸುವರ್ಣ ಸಂಭ್ರಮದ ಪಯಣವನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಕೃಷ್ಣಮೃಗಗಳ ಸಂರಕ್ಷಣೆಗಾಗಿ 1974, ಜೂ.17ರಂದು ಅಧಿಸೂಚನೆಯ ಮೂಲಕ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಅಸ್ತಿತ್ವಕ್ಕೆ ಬಂದಿತು. 119 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಈ ಅಭಯಾರಣ್ಯಕ್ಕೆ ಇದೀಗ ಐದು ದಶಕಗಳ ಇತಿಹಾಸ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಸುತ್ತಮುತ್ತಲಿನ ಒಣ ಪ್ರದೇಶದ ಹುಲ್ಲುಗಾವಲುಗಳು ಕೃಷ್ಣಮೃಗಗಳ ಆವಾಸಕ್ಕೆ ಪೂರಕವಾಗಿದ್ದವು. ಇದೇ ಕಾರಣಕ್ಕೆ ಈ ಪ್ರದೇಶವನ್ನು ಸಂರಕ್ಷಿತ ವನ್ಯಜೀವಿ ಪ್ರದೇಶವಾಗಿ ಘೋಷಿಸಲಾಯಿತು. ಅಭಯಾರಣ್ಯವು ಮುಖ್ಯವಾಗಿ ಪೊದೆಕಾಡು, ಹುಲ್ಲುಗಾವಲು ಹಾಗೂ ನೆಡುತೋಪುಗಳನ್ನು ಒಳಗೊಂಡಿದೆ. 15 ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ವೇಳೆ 7 ಸಾವಿರಕ್ಕಿಂತ ಹೆಚ್ಚು ಕೃಷ್ಣಮೃಗಗಳು ಇದ್ದವು. ಈಗ ದುಪ್ಪಟ್ಟಾಗಿರುವ ಸಾಧ್ಯತೆಯಿದೆ.

ಅಭಯಾರಣ್ಯವು ಎರಡು ಪ್ರತ್ಯೇಕ ಭಾಗಗಳಾಗಿ ಹರಡಿಕೊಂಡಿದ್ದು, ಕೋರ್‌ ವಲಯ ಮತ್ತು ಪ್ರವಾಸೋದ್ಯಮಕ್ಕೆ ಅವಕಾಶವಿರುವ ಬಫರ್‌ ವಲಯ ಹೊಂದಿದೆ. ರಾಜ್ಯ ಪ್ರವಾಸೋದ್ಯಮದ ಪ್ರಕಾರ ಒಟ್ಟು 119 ಚದರ ಕಿ.ಮೀ. ಪ್ರದೇಶದಲ್ಲಿ ಸುಮಾರು 15 ಚದರ ಕಿಮೀ ಕೋರ್‌ ವಲಯ ಹಾಗೂ 104 ಚದರ ಕಿಮೀ ಹೆಚ್ಚುವರಿ ಪ್ರದೇಶವಿದೆ. ಇದರಿಂದ ವನ್ಯಜೀವಿ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಪ್ರಶಸ್ತವಾಗಿದೆ.

ಕೃಷ್ಣಮೃಗಗಳ ಜತೆಗೆ ಜೀವವೈವಿಧ್ಯ: ಹೆಸರೇ ಕೃಷ್ಣಮೃಗ ಅಭಯಾರಣ್ಯವಾದರೂ, ಇದು ಕೇವಲ ಕೃಷ್ಣಮೃಗಗಳ ನೆಲೆಯಲ್ಲ. ತೋಳ, ನರಿ, ಕತ್ತೆಕಿರುಬ, ಕಾಡುಹಂದಿ, ಮುಂಗುಸಿ, ಮೊಲ ಸೇರಿದಂತೆ ಹಲವು ವನ್ಯಜೀವಿಗಳಿಗೆ ಈ ಪ್ರದೇಶ ಆಶ್ರಯವಾಗಿದೆ. ವಿವಿಧ ಜಾತಿಯ ಪಕ್ಷಿಗಳಿಗೂ ಇದು ಪ್ರಮುಖ ವಾಸಸ್ಥಳವಾಗಿದೆ. 200ಕ್ಕೂ ಹೆಚ್ಚು ಜಾತಿಯ ಪಕ್ಷಿಗಳೂ ಇಲ್ಲಿ ಕಂಡುಬರುತ್ತವೆ. ಒಂದು ಕಾಲದಲ್ಲಿ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಕೂಡ ಇಲ್ಲಿ ಕಂಡುಬರುತ್ತಿತ್ತು. ಆದರೆ ಆ ಪಕ್ಷಿಯ ವಾಸಸ್ಥಳ ಮತ್ತು ಸಂಖ್ಯೆಯ ಕುಸಿತದಿಂದಾಗಿ ಅದರ ಇತ್ತೀಚಿನ ಉಪಸ್ಥಿತಿ ಪ್ರಶ್ನಾರ್ಹವಾಗಿದೆ. 2023ರ ವೈಜ್ಞಾನಿಕ ಅಧ್ಯಯನವೂ ಅಭಯಾರಣ್ಯದ ಪ್ರಮುಖ ಸಂರಕ್ಷಣಾ ಉದ್ದೇಶಗಳಲ್ಲಿ ಕೃಷ್ಣಮೃಗದ ಜತೆಗೆ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಕೂಡ ಸೇರಿತ್ತು ಎಂದು ದಾಖಲಿಸಿದೆ.

50 ವರ್ಷಗಳಲ್ಲಿ ಬದಲಾದ ಚಿತ್ರಣ: 1974ರಲ್ಲಿ ಸಂರಕ್ಷಣೆಯ ಉದ್ದೇಶದಿಂದ ಆರಂಭವಾದ ಅಭಯಾರಣ್ಯ, ಕಾಲಕ್ರಮೇಣ ವನ್ಯಜೀವಿ ಪ್ರವಾಸೋದ್ಯಮದ ತಾಣವಾಗಿಯೂ ಗುರುತಿಸಿಕೊಳ್ಳುತ್ತಿದೆ. ಕೃಷ್ಣಮೃಗಗಳ ಹಿಂಡುಗಳನ್ನು ಅವುಗಳ ಸಹಜ ಆವಾಸದಲ್ಲೇ ವೀಕ್ಷಿಸುವ ಅವಕಾಶ ಪ್ರವಾಸಿಗರನ್ನು ಸೆಳೆಯುತ್ತಿದೆ.

2024ರಲ್ಲಿ ರಾಜ್ಯ ಸರ್ಕಾರವು ಅಭಯಾರಣ್ಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸಫಾರಿ ವ್ಯವಸ್ಥೆಗೆ ಚಾಲನೆ ನೀಡಿತ್ತು. ಇದರಿಂದ ರಾಣಿಬೆನ್ನೂರು ಪ್ರವಾಸೋದ್ಯಮದ ನಕ್ಷೆಯಲ್ಲಿ ಹೊಸ ಗುರುತಿನತ್ತ ಸಾಗುತ್ತಿದೆ. ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ್ದು, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಸಂರಕ್ಷಣೆಯ ಜತೆಗೆ ಸವಾಲು: ಅಭಯಾರಣ್ಯದ ಸುತ್ತಲೂ ಕೃಷಿ ಪ್ರದೇಶಗಳಿರುವುದರಿಂದ ವನ್ಯಜೀವಿ–ಕೃಷಿ ಪ್ರದೇಶದ ನಡುವಿನ ಸಂಘರ್ಷ, ಆವಾಸಸ್ಥಳದ ಸಂರಕ್ಷಣೆ, ಹುಲ್ಲುಗಾವಲುಗಳ ನಿರ್ವಹಣೆ ಮತ್ತು ಮಾನವ ಚಟುವಟಿಕೆಗಳ ನಿಯಂತ್ರಣ ಪ್ರಮುಖ ಸವಾಲುಗಳಾಗಿವೆ. ಕೃಷ್ಣಮೃಗಗಳಂತಹ ಹುಲ್ಲುಗಾವಲು ಆಧಾರಿತ ವನ್ಯಜೀವಿಗಳ ಉಳಿವಿಗೆ ಕೇವಲ ಮರ ಬೆಳೆಸುವುದಕ್ಕಿಂತ ನೈಸರ್ಗಿಕ ಹುಲ್ಲುಗಾವಲು ಪರಿಸರದ ಸಂರಕ್ಷಣೆ ಕೂಡ ಅಷ್ಟೇ ಮುಖ್ಯವಾಗಿದೆ.

ಮುಂದಿನ 50 ವರ್ಷಗಳ ಗುರಿ ಏನು?: ಐದು ದಶಕಗಳ ಹಿಂದೆ ಕೃಷ್ಣಮೃಗಗಳ ರಕ್ಷಣೆಗಾಗಿ ರೂಪುಗೊಂಡ ಅಭಯಾರಣ್ಯ ಇಂದು ಹೊಸ ಹಂತಕ್ಕೆ ಕಾಲಿಡುತ್ತಿದೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕ ರೀತಿಯ ಹುಲ್ಲುಗಾವಲು ನಿರ್ವಹಣೆ, ವನ್ಯಜೀವಿ ಗಣತಿ, ಆವಾಸಸ್ಥಳದ ರಕ್ಷಣೆ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವಕ್ಕೆ ಒತ್ತು ನೀಡಿದರೆ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ ವನ್ಯಜೀವಿ ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ಸಮತೋಲನದ ಮಾದರಿಯಾಗುವ ಅವಕಾಶ ಹೊಂದಿದೆ. ಐದು ದಶಕಗಳ ಪಯಣ ಪೂರ್ಣಗೊಳಿಸಿರುವ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ, ಕೃಷ್ಣಮೃಗಗಳ ಓಟದೊಂದಿಗೆ ತನ್ನ ಮುಂದಿನ ಅಧ್ಯಾಯದತ್ತ ಹೆಜ್ಜೆ ಹಾಕುತ್ತಿದೆ.

ಜಿಲ್ಲೆಯಲ್ಲಿ ಕಾಗಿನೆಲೆ, ಬಾಡ, ಶಿಶುವಿನಹಾಳ, ಸವಣೂರು ನವಾಬರ ಅರಮನೆ, ಬಂಕಾಪುರ ನವಿಲುಧಾಮ, ಬ್ಯಾಡಗಿ ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ, ಗಳಗನಾಥ, ಕದರಮಂಡಲಗಿ ದೇವಸ್ಥಾನ, ಗೊಟಗೋಡಿ ರಾಕ್‌ ಗಾರ್ಡನ್‌ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳನ್ನು ಒಳಗೊಂಡ ಟೂರ್‌ ಸರ್ಕ್ಯೂಟ್‌ ಶುರು ಮಾಡಿದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಆಸಕ್ತಿ ತೋರಬೇಕಿದೆ.

ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅ. 2ರಿಂದ 8ರ ವರೆಗೆ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ವನ್ಯಜೀವಿ ಸಂರಕ್ಷಣೆ ಜತೆಗೆ ಹಾವೇರಿ ಜಿಲ್ಲೆಯನ್ನು ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಅಭಯಾರಣ್ಯದ ರಸ್ತೆ ಹಾಗೂ ಪ್ರವಾಸಿಗರ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.