ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿಯಲ್ಲಿಂದು ಶ್ರೀ ಭಾರತೀ ತೀರ್ಥರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ

| Published : Jan 11 2025, 12:45 AM IST / Updated: Jan 11 2025, 12:48 PM IST

ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿಯಲ್ಲಿಂದು ಶ್ರೀ ಭಾರತೀ ತೀರ್ಥರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮಘಟ್ಟಗಳ ತಪ್ಪಲು, ಸಹ್ಯಾದ್ರಿ ಪರ್ವತ ಸಾಲಿನಂಚಿನಲ್ಲಿರುವ ತುಂಗೆ ತಟದ ಶ್ರೀ ಶಾರದಾ ಪೀಠ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ.

 ಶೃಂಗೇರಿ : ಪಶ್ಚಿಮಘಟ್ಟಗಳ ತಪ್ಪಲು, ಸಹ್ಯಾದ್ರಿ ಪರ್ವತ ಸಾಲಿನಂಚಿನಲ್ಲಿರುವ ತುಂಗೆ ತಟದ ಶ್ರೀ ಶಾರದಾ ಪೀಠ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠ ಗಳಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠವೂ ಒಂದು. ಪೀಠದಲ್ಲಿ ಇಂದಿಗೂ ಅವಿಚ್ಚಿನ್ನ ಗುರುಪರಂಪರೆ ಮುಂದುವರಿದುಕೊಂಡು ಬಂರುತ್ತಿದೆ.

ಶೃಂಗೇರಿ ಶ್ರೀ ಶಾರದಾ ಪೀಠದ 36 ನೇ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಸನ್ಯಾಸ ಸ್ವೀಕರಿಸಿ ಸುಮಾರು 50 ವರ್ಷ ಗಳನ್ನು ಪೋರೈಸುತ್ತಿರುವ ಹಿನ್ನೆಲೆಯಲ್ಲಿ ಪೀಠದಲ್ಲಿ ಜ.11 ರ ಶನಿವಾರ ಸುವರ್ಣ ಮಹೋತ್ಸವ ಸಂಭ್ರಮ ನಡೆಯುತ್ತಿದೆ.

1954 ಏಪ್ರಿಲ್ 11 ರಂದು ಶ್ರೀ ವೆಂಕಟೇಶ್ವರ ಅವಧಾನಿ ಮತ್ತು ಅನಂತಲಕ್ಷ್ಮಿ ದಂಪತಿ ಪುತ್ರರಾಗಿ ಜನಿಸಿದ ಇವರಿಗೆ ಸಿತಾರಾಮಾಂಜನೇಯ ಎಂಬ ಹೆಸರು ನಾಮಕರಣ ಮಾಡಲಾಯಿತು. ವೇದಶಾಸ್ತ್ರಗಳಲ್ಲಿ ಸಂಪೂರ್ಣ ಅಧ್ಯಯನ ನಡೆಸಿ ಪಾಂಡಿತ್ಯ ಗಳಿಸಿಕೊಂಡಿದ್ದ ಇವರು ಪೀಠದ 35 ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರ ಶಿಷ್ಯರಾಗಿ 1974 ನವೆಂಬರ್ 11 ರಂದು ಸನ್ಯಾಸ ದೀಕ್ಷೆ ಪಡೆದರು. ಸೀತಾರಾಮಾಂಜನೇಯ ಶ್ರೀ ಭಾರತೀ ತೀರ್ಥ ಎಂಬ ನಾಮಾಂಕರಣದೊಂದಿಗೆ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರ ಉತ್ತರಾಧಿಕಾರಿಗಳಾದರು.

ಅಕ್ಟೋಬರ್ 19,1989 ರಂದು ಶೃಂಗೇರಿ ಪೀಠದ 36 ನೇ ಪೀಠಾಧಿಪತಿಯಾಗಿ ಪಟ್ಟಾಭಿಷಿಕ್ತರಾದರು. ಕ್ಷೇತ್ರ ಇವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತು. ಸನ್ಯಾಸ ಸ್ವೀಕಾರ ರಜತ ಮಹೋತ್ಸವ ಸಂದರ್ಭದಲ್ಲಿ ಶ್ರೀ ಶಾರದಾಂಬೆಗೆ ಚಿನ್ನದ ರಥ ಸಮರ್ಪಣೆ, ಶ್ರೀ ಶಾರದಾಂಬಾ ದೇವಾಲಯಕ್ಕೆ ಸ್ವರ್ಣಲೇಪಿತ ಶಿಖರ, 127 ಅಡಿ ಎತ್ತರದ ರಾಜಪೋಪುರ ನಿರ್ಮಾಣ , ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ದೇವಾಲಯಕ್ಕೆ ರಾಜಗೋಪುರ, ಪಟ್ಟಣದ ಹನುಮಗಿರಿಯಲ್ಲಿ 32 ಅಡಿ ಎತ್ತರದ ಆದಿ ಶಂಕರಾಚಾರ್ಯರ ಬೃಹತ್ ಶಿಲಾಮಯ ಮೂರ್ತಿ,ಶ್ರೀಮಠದ ಆವರಣದಲ್ಲಿ ಶ್ರೀ ಶಂಕರಾಚಾರ್ಯರ ದೇವಾಲಯ ನಿರ್ಮಾಣ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.

ಜಗದ್ಗುರುಗಳ ಸನ್ಯಾಸ ಸ್ವೀಕಾರ ಮಹೋತ್ಸವದ ಅಂಗವಾಗಿ ಸುವರ್ಣ ಭಾರತಿ ಕಾರ್ಯಕ್ರಮದಡಿ ವರ್ಷವಿಡೀ ಅನೇಕ ಧಾರ್ಮಿಕ ,ಆದ್ಯಾತ್ಮಿಕ,ಆರೋಗ್ಯ ಸಹಿತ ಜನಕಲ್ಯಾಣ ಕಾರ್ಯಕ್ರಮಗಳು ನಡೆಯಿತು.

ಶನಿವಾರ ಶ್ರೀಮಠದ ನರಸಿಂಹವನದಲ್ಲಿ ಬೆಳಿಗ್ಗೆ 10.30 ಕ್ಕೆ ಸ್ತೋತ್ರ ತೀವ್ರೇಣಿ ಮಹಾ ಸಮರ್ಪಣೆ ನಡೆಯಲಿದೆ. ಪೀಠದ ಉಭಯ ಜಗದ್ಗುರುಗಳ ದಿವ್ಯಾ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಂತರ ಜಗದ್ಗುರುಗಳು ಆಶೀರ್ವಚನ ನೀಡಲಿದ್ದಾರೆ.

ಸುವರ್ಣ ಸಂಭ್ರಮಕ್ಕಾಗಿ ಇಡೀ ಪಟ್ಟಣವನ್ನೇ ಸಿಂಗರಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಉದ್ದಕ್ಕೂ ಸಿಂಗರಿಸಲಾಗಿದೆ. ಪಟ್ಟಣವನ್ನು ಸಿಂಗರಿಸಲಾಗಿದೆ.