ಸುಕ್ಷೇತ್ರದ ಎಲ್ಲ ಆರು ಹಿರಿಯ ಶ್ರೀಗಳವರ ತಪಸ್ಸಿನ ಫಲದ ಕೃಪಾಶೀರ್ವಾದ ಹಾಗೂ ಭಕ್ತರ ಸಹಕಾರದಿಂದ ಜಾತಿ ರಹಿತವಾಗಿ ಸಮಾಜದ ಏಳಿಗೆಗೆ ಕೆರೆಗೋಡಿ-ರಂಗಾಪುರ ಶ್ರೀಮಠವು ಶ್ರಮಿಸುತ್ತಾ ಮುನ್ನಡೆಯುತ್ತಿದೆ ಎಂದು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸುಕ್ಷೇತ್ರದ ಎಲ್ಲ ಆರು ಹಿರಿಯ ಶ್ರೀಗಳವರ ತಪಸ್ಸಿನ ಫಲದ ಕೃಪಾಶೀರ್ವಾದ ಹಾಗೂ ಭಕ್ತರ ಸಹಕಾರದಿಂದ ಜಾತಿ ರಹಿತವಾಗಿ ಸಮಾಜದ ಏಳಿಗೆಗೆ ಕೆರೆಗೋಡಿ-ರಂಗಾಪುರ ಶ್ರೀಮಠವು ಶ್ರಮಿಸುತ್ತಾ ಮುನ್ನಡೆಯುತ್ತಿದೆ ಎಂದು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ತಿಳಿಸಿದರು.

ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ನಡೆದ ಶ್ರೀಗುರು ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭ ಹಾಗೂ ಅವರ ಪಟ್ಟಾಭಿಷೇಕವಾಗಿ ೫೧ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಅಂಗವಾಗಿ ಹಮ್ಮಿಕೊಳ್ಳಲಿರುವ ಸುವರ್ಣ ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಂದರ್ಭದಲ್ಲಿ ಆಶೀರ್ವಚನ ನೀಡುತ್ತಿದ್ದರು.

ಸಮಸಮಾಜ ನಿರ್ಮಾಣ, ಶಿಕ್ಷಣ, ದಾಸೋಹ ಜೊತೆ ದೇಶದ ಏಳಿಗೆಗೆ ದುಡಿಯುತ್ತಿರುವ ಮಠಮಾನ್ಯಗಳಿಗೆ ಭಕ್ತರ ಸಹಕಾರವೇ ಮುಖ್ಯವಾಗಿದೆ. ನಮ್ಮ ಮಠಕ್ಕೆ ಜೋಳಿಗೆಯೇ ಪ್ರಮುಖ ಆರ್ಥಿಕ ಮೂಲವಾಗಿದ್ದು ರೈತರು ನೀಡುವ ಭಿಕ್ಷೆಯಿಂದ ಉಚಿತ ಶಿಕ್ಷಣ, ದಾಸೋಹ ಮತ್ತು ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗಿದೆ. ಯುವಶಕ್ತಿ ಹೆತ್ತವರನ್ನು ಕಡೆಗಣನೆ ಮಾಡದೆ ಧರ್ಮಮಾರ್ಗದಲ್ಲಿ ನಡೆದುಕೊಂಡು ಕೊನೆಯವರೆಗೂ ಅವರನ್ನು ಆರೋಗ್ಯಯುತವಾಗಿ ಸಾಕಿ ಸಲಹಬೇಕು. ಇತ್ತೀಚಿಗೆ ಯುವಶಕ್ತಿ ನಾನಾ ರೀತಿಯ ವ್ಯಸನಗಳು ಹಾಗೂ ಆಧುನಿಕ ಜೀವನ ಶೈಲಿಗೆ ಮಾರುಹೋಗುತ್ತಿರುವುದರಿಂದ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದರು. ಬಿಜೆಪಿ ಮುಖಂಡ ಹಾಗೂ ನಿವೃತ್ತ ಎಸಿಪಿ ಲೋಕೇಶ್ವರ ಮಾತನಾಡಿ, ಮನುಷ್ಯನು ಇತ್ತೀಚೆಗೆ ಸಂಪರ್ಕ ಹಾಗೂ ಸಂಬಂಧಗಳಿಗೆ ವ್ಯತ್ಯಾಸವಿಲ್ಲದಂತೆ ನಡೆದುಕೊಳ್ಳುತ್ತಿದ್ದು ಇದರಿಂದ ಕುಟುಂಬಗಳಲ್ಲಿ ನೆಮ್ಮದಿ ಕಳೆದು ಹೋಗುತ್ತಿದೆ. ಹೆಚ್ಚಿನ ಯುವಕರು ಹೆಚ್ಚಿನ ದುಡಿಮೆ ಮತ್ತು ಆಧುನಿಕ ಬದುಕಿಗೆ ತಮ್ಮನ್ನು ಒಡ್ಡಿಕೊಂಡು ಹೆತ್ತವರು ಸೇರಿದಂತೆ ಕುಟುಂಬ ಮತ್ತು ಬಂಧುಗಳನ್ನು ಕೇವಲ ಮೊಬೈಲ್ ಸಂಪರ್ಕಗಳಿಂದ ಮಾತ್ರ ಸಂಪರ್ಕದಲ್ಲಿಟ್ಟುಕೊಳ್ಳುವ ಕೆಟ್ಟ ಸಂಪ್ರದಾಯ ಬೆಳೆಸಿಕೊಂಡು ನಿಜವಾದ ಮಾನವ ಸಂಬಂಧಗಳಿಗೆ ತಿಲಾಂಜಲಿ ಇಡುತ್ತಿರುವುದರಿಂದ ಭವಿಷ್ಯದ ಪೀಳಿಗೆ ಮತ್ತಷ್ಟು ಅಪಾಯ ಸೃಷ್ಟಿಸುವ ಭಯ ಕಾಡುತ್ತಿದೆ ಎಂದರು.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ಸಮುದಾಯಕ್ಕೊಂದು ಮಠಗಳು ಹುಟ್ಟಿಕೊಂಡು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿರುವುದು ಒಂದು ಕಡೆಯಾದರೆ ಕೆರೆಗೋಡಿ-ರಂಗಾಪುರ ಶ್ರೀಮಠ ಜಾತಿ, ಭೇಧ ಮಾಡದೆ ಮನುಷ್ಯತ್ವಕ್ಕೆ ಬೆಲೆ ನೀಡಿ ಜ್ಞಾನ, ಅನ್ನ, ಸಂಸ್ಕಾರ ನೀಡುತ್ತಿದೆ. ಶ್ರೀಮಠ ಹಾಸನದಲ್ಲಿ ಶಾಖೆ ತೆರೆದು ಶಿಕ್ಷಣ, ದಾಸೋಹ ನಡೆಸಲು ಹಾಸನದಲ್ಲಿಯೂ ಸ್ಥಳ ನೀಡಲಿದ್ದು ಶ್ರೀಗಳ ಸುವರ್ಣ ಮಹೋತ್ಸವದಲ್ಲಿಯೇ ಅದನ್ನು ನೀಡಲಾಗುವುದು ಎಂದರು.ಅರಸೀಕೆರೆಯ ಮಾಡಾಳು ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹಾಗೂ ಗೊಲ್ಲಹಳ್ಳಿಯ ಶ್ರೀ ಸಿದ್ಧಲಿಂಗೇಶ್ವರ ಮಠದ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಷಡಕ್ಷರಿ ಮಾತನಾಡಿದರು. ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಅಧ್ಯಕ್ಷ ನವಿಲೆ ಪರಮೇಶ್, ಆದಿಹಳ್ಳಿ ಆದಿಲಕ್ಷ್ಮೀ ಕ್ಷೇತ್ರದ ಶಿವಾನಂದ ಸ್ವಾಮೀಜಿ ಮಾತನಾಡಿದರು. ನೆಲಮಂಗಲದ ಯಂಟಗಾನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ನಿರಜಾ ಲೋಕೇಶ್ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ತಹಸೀ ಲ್ದಾರ್ ಜಿ.ವಿ.ಮೋಹನ್ ಕುಮಾರ್, ಹಿರಿಯ ವಿದ್ಯಾರ್ಥಿ ಹಾಗೂ ಶ್ರೀಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷ ಯು.ಕೆ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜು, ಶಂಕರಪ್ಪ ಸೇರಿದಂತೆ ಅನೇಕ ಗಣ್ಯರಿದ್ದರು.