ಸಾರಾಂಶ
ಉಸ್ತುವಾರಿ ಸಚಿವ ವೆಂಕಟೇಶ್ ಹೇಳಿಕೆ । ಆಗಸ್ಟ್ 8 ರಂದು ಜಿಲ್ಲೆಗೆ ಕನ್ನಡ ರಥ ಆಗಮನ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಸರ್ಕಾರವು ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ವರ್ಷವಿಡಿ ನಾಡು ನುಡಿ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.ನಗರದ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಖ್ಯಾತ ಕನ್ನಡ ಚಲನಚಿತ್ರ ಗಾಯಕರು, ಸಂಗೀತ ನಿರ್ದೇಶಕರ ಸಂಗೀತೋತ್ಸವ ಹಾಗೂ ಹಾಸ್ಯ ಕಲಾವಿದರ ಹಾಸ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ್ದು, ಇದರ ಸಂಭ್ರಮವನ್ನು ರಾಜ್ಯ ಸರ್ಕಾರ ವರ್ಷವಿಡೀ ಅನೇಕ ಕನ್ನಡ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಮುಖ್ಯಮಂತ್ರಿಗಳು ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಅದ್ದೂರಿ ಆಚರಣೆಗೆ ಘೋಷಣೆ ಮಾಡಿದ್ದು ಇದರ ಅಂಗವಾಗಿ ರಾಜ್ಯದ ಎಲ್ಲೆಡೆ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.ಇದೇ ಆಗಸ್ಟ್ 8 ರಂದು ಜಿಲ್ಲೆಗೆ ಕನ್ನಡ ರಥ ಆಗಮಿಸಲಿದ್ದು ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ. ಕನ್ನಡದ ಬಗೆಗಿನ ಪ್ರೇಮ, ನಾಡು, ನುಡಿ ಜಾಗೃತಿ ಮೂಡಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.ಕನ್ನಡ ಬಾಷೆಗೆ ಉತ್ತೇಜನ ನೀಡುವಲ್ಲಿ ಆದ್ಯತೆ ನೀಡಿದ್ದು ,ನಾಡಿನ ಸಂಸ್ಕೃತಿ ಪರಂಪರೆ ಪೋಷಿಸಿ ಉತ್ತೇಜಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದರು.ಕನ್ನಡ ಕುರಿತು ಅಭಿಮಾನ ಪ್ರೀತಿ ಎಲ್ಲರಲ್ಲಿಯೂ ಮತ್ತಷ್ಟು ಹೆಚ್ಚಾಗಲಿ, ಸರ್ಕಾರ ಕನ್ನಡ ಬಗೆಗಿನ ಕಾರ್ಯಕ್ರಮಗಳನ್ನೂ ಇನ್ನೂ ಹೆಚ್ಚು ಹಮ್ಮಿಕೊಳ್ಳಲಿದೆ. ಕರ್ನಾಟಕ 50 ರ ಸಂಭ್ರಮ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ತಿಳಿಸಿದರು.ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು , ಎಡಿಸಿ ಗೀತಾ ಹುಡೇದ, ಅಬಕಾರಿ ಉಪ ಆಯುಕ್ತ ನಾಗಶಯನ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.