ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಆರು ಮಂದಿಗೆ ಈ ಬಾರಿಯ ರಾಜ್ಯೋತ್ಸವ ಹಾಗೂ ನಾಲ್ವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಲಾಗಿದೆ.ಲಲಿತರಾವ್- ನೃತ್ಯ, ಡಾ. ಮೈಸೂರು ಸತ್ಯನಾರಾಯಣ- ವೈದ್ಯಕೀಯ, ಡಿ. ರಾಮು, ಎಚ್. ಜನಾರ್ಧನ್- ರಂಗಭೂಮಿ, ಅರುಣ್ ಯೋಗಿರಾಜ್- ಶಿಲ್ಪಕಲೆ ಅವರಿಗೆ ಮೈಸೂರು ಜಿಲ್ಲೆಯ ಕೋಟಾದಲ್ಲೂ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ [ಶಿಕ್ಷಣ] ಅವರಿಗೆ ಕೊಡಗು ಜಿಲ್ಲೆಯ ಕೋಟಾದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಕೆಂಚಯ್ಯ- ಜಾನಪದ, ಫಜ್ಲು ರೆಹಮಾನ್ ಖಾನ್- ಚಿತ್ರಕಲೆ, ಮಾಲತಿಶ್ರೀ- ರಂಗಭೂಮಿ, ಡಾ.ರತಿರಾವ್- ವಿಜ್ಞಾನ, ತಂತ್ರಜ್ಞಾನ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರಿಗೆ ಸಮಾಜಸೇವೆ ಕ್ಷೇತ್ಪದಿಂದ ಚಿಕ್ಕಮಗಳೂರು ಕೋಟಾದಲ್ಲಿ ಪ್ರಶಸ್ತಿ ನೀಡಲಾಗಿದೆ. ಪ್ರೊ. ಪದ್ಮಾ ಶೇಖರ್ಪ್ರೊ.ಪದ್ಮಾ ಶೇಖರ್ ಅವರು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ. ಜೈನ ಸಾಹಿತ್ಯದ ಜ್ಞಾನ ಪ್ರಸಾರದಲ್ಲಿ ತೊಡಗಿಸಿಕೊಂಡವರು. ಕೊಡಗು ಜಿಲ್ಲೆಯಲ್ಲಿ ಜನನ. ಪ್ರೊ.ಸೋಮಶೇಖರ ಗೌಡ ಅವರನ್ನು ವಿವಾಹವಾಗಿದ್ದಾರೆ. ಮಾತ್ರೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಶ್ರೀ ಚೌಡಯ್ಯಸಾಹಿತ್ಯ ಪ್ರಶಸ್ತಿ, ಆದರ್ಶ ಮಹಿಳಾ ರಾಷ್ಟ್ರೀಯ ಪುರಸ್ಕಾರ ಸಂದಿವೆ. ಎಚ್. ಜನಾರ್ಧನ್
ಮೈಸೂರು ರಂಗಾಯಣದ ಮಾಜಿ ನಿರ್ದೇಶಕರಾದ ಎಚ್. ಜನಾರ್ಧನ್ ಅವರು ಜನ್ನಿ ಎಂದೇ ಖ್ಯಾತರು. ಎನ್ಎಸ್ಡಿ ಪದವೀಧರರು. ಕಳೆದ ಐದು ದಶಕಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯರು. ದಲಿತ ಚಳವಳಿ, ಸಮುದಾಯ ರಂಗ ಚಳವಳಿಯ ಮೂಲಕ ರಂಗಪ್ರವೇಶ ಮಾಡಿದವರು. ನಟ, ನಿರ್ದೇಶಕ, ಬೀದಿ ನಾಟಕಗಳ ರೂವಾರಿ. ಬರ, ಮತದಾನ, ಅಮಾಸ, ಅಆಇಈ, ದುನಿಯಾ, ಪರಿ, ಮಾತಾಡ್ ಮಾತಾಡ್ ಮಲ್ಲಿಗೆ, ಸಿಂಗಾರವ್ವ ಅರಮನೆ, ನೋಡು ಬಾ ನಮ್ಮೂರ ಚಿತ್ರಗಳಲ್ಲಿ ಹಾಡಿದ್ದಾರೆ. ನೋಡು ಬಾ ನಮ್ಮೂರ ಚಿತ್ರದ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಸಾಕ್ಷರತಾ ಆಂದೋಲನದಲ್ಲೂ ಭಾಗಿಯಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಂಗಶ್ರೀ ಪ್ರಶಸ್ತಿ, ಖಾಸಗಿ ವಾಹಿನಿಯ ವರ್ಷದ ಕನ್ನಡಿಗ ಪ್ರಶಸ್ತಿಗೆ ಭಾಜನರು. ಲಲಿತಾರಾವ್ಮೈಸೂರು ಶೈಲಿಯ ಭರತನಾಟ್ಯ ಶಿಕ್ಷಣವನ್ನು 52 ವರ್ಷಗಳಿಂದ ನಿರಂತರವಾಗಿ ಮುಂದುವರೆಸುತ್ತಿರುವ ಹಿರಿಯಚೇತನ ಲಲಿತಾ ಕೋರೆ ಎಂ. ರಾವ್ ಅವರು. ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ ಅವರ ಶಿಷ್ಯೆ. ಶಾಂತಲಾ ನೃತ್ಯಕಲಾ ನಿಕೇತನ ಪ್ರಾರಂಭಿಸಿ, ಸಾವಿರಾರು ಮಂದಿಗೆ ನೃತ್ಯ ಕಲಿಸಿದ್ದಾರೆ. ನೂಪುರಶ್ರೀ, ಅತ್ಯುತ್ತಮ ಭರತನಾಟ್ಯ ಶಿಕ್ಷಕಿ ಪ್ರಶಸ್ತಿ, ಕಲಾದೀಪ್ತಿ, ನಾಟ್ಯ ಮಯೂರಿ, ನೃತ್ಯವಿದ್ಯಾನಿಧಿ, ನಾಟ್ಯಕಲಾ ಮಯೂರಿ ಮತ್ತಿತರ ಪ್ರಶಸ್ತಿಗಳಿಗೆ ಭಾಜನರು. ಡಿ. ರಾಮು
ಮೈಸೂರಿನ ನಜರಬಾದ್ ಬ್ಯಾಂಡ್ ಬಂಗಲೆ ರಸ್ತೆಯ ನಿವಾಸಿಯಾದ ಡಿ. ರಾಮು ಅವರು ಎ.ಎ. ನಾರಾಯಣಪ್ಪ ಅವರಿಂದ ಸಂಗೀತ ಕಲಿತವರು. ಜಿ.ಎಂ. ಪೆರೇರ ಅವರ ಬಳಿ ಕೂಡ ಆಂಗ್ಲ ಸಂಗೀತ ಕಲಿತವರು. ಚಾಮುಂಡೇಶ್ವರಿ ನಾಟಕ ಕಂಪನಿ, ಕೊಟ್ಟೂರಪ್ಪ ನಾಟಕ ಕಂಪನಿ, ಹಿರಣಯ್ಯ ಮಿತ್ರ ನಾಟಕ ಕಂಪನಿ, ಶೇಷಾಚಾರ್ ನಾಟಕ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕಲಾಶ್ರೀ, ಗಣಪತಿ ಆಶ್ರಮದ ಆಸ್ಥಾನ ವಿದ್ವಾನ್, ಮೈಸೂರು ಸಂಗೀತ ಕಲಾ ಬಳಗ, ತ್ಯಾಗರಾಜ ಸಂಗೀತ ಸಭಾದಿಂದ ಕಲಾ ತಪಸ್ವಿ ಮೊದಲಾದ ಪ್ರಶಸ್ತಿಗಳು ಸಂದಿವೆ. ಅರುಣ್ ಯೋಗಿರಾಜ್ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಿಸಿರುವ ಶ್ರೀರಾಮಮಂದಿರದಲ್ಲಿ ಬಾಲರಾಮನ ಸುಂದರ ಹಾಗೂ ಆಕರ್ಷಕವಾದ ವಿಗ್ರಹವನ್ನು ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್. ಐದು ತಲೆಮಾರುಗಳಿಂದ ಶಿಲ್ಪಕಲೆಯನ್ನು ಅಪ್ಪಿಕೊಂಡಿರುವ ಕುಟುಂಬದ ಕುಡಿ ಅವರು.
ದೆಹಲಿಯ ಇಂಡಿಯಾ ಗೇಟ್ ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಕೇದಾರನಾಥದಲ್ಲಿ ಪ್ರತಿಷ್ಠಾಪಿಸಿರುವ ಶಂಕರಾಚಾರ್ಯರ ಪ್ರತಿಮೆ ಅರಣ್ ಅವರೇ ತಯಾರಿಸಿದ್ದು. ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಪ್ರತಿಮೆ, ಉದ್ಬೂರು ಗೇಟ್ ಬಳಿ ಕನ್ನಡದ ಖ್ಯಾತ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಕೂಡ ಇವರೇ ನಿರ್ಮಿಸಿದ್ದಾರೆ.ಅರುಣ್ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಪ್ರತಿಷ್ಠಿತ ನಾಲ್ವಡಿ ಕೃಷ್ಣರಾಜ ಒಡೆಯರ್ರ್ ಪ್ರಶಸ್ತಿ, ಕರ್ನಾಟಕ ಕರಕುಶಲ ಪರಿಷತ್ನ ಗೌರವ ಸದಸ್ಯತ್ವ, ದಕ್ಷಿಣ ವಲಯ ಯುವ ಕಲಾಕಾರ, ಶಿಲ್ಪಕೌಸ್ತುಭ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ, ಮುಖ್ಯಮಂತ್ರಿಗಳಿಂದ ಗೌರವ ಪುರಸ್ಕಾರ, ಕ್ರೀಡಾ ಅಕಾಡೆಮಿಯಿಂದ ಗೌರವ, ಅಮರಶಿಲ್ಪಿ ಜಕಣಾಚಾರ್ಯ ಟ್ರಸ್ಟ್ನಿಂದ ಗೌರವ ದೊರೆತಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಶಿಲ್ಪಕಲಾಕೃತಿಗಳ ಸ್ಪರ್ಧೆ ಮತ್ತು ಶಿಬಿರಗಳಲ್ಲಿ ಪಾಲ್ಗೊಂಡ ಹೆಮ್ಮೆ ಇವರಿಗಿದೆ.
----------------------ಕೋಟ್ಗಳು....
ಶಿಕ್ಷಣ ಕ್ಷೇತ್ರದ ಸೇವೆ ಗುರುತಿಸಿದ್ದು ಸಂತಸ ತಂದಿದೆನಾನು ಉಪನ್ಯಾಸಕಿ, ಪ್ರವಾಚಕಿ, ಪ್ರಾಧ್ಯಾಪಕಿ, ಕೊನೆಗೆ ಕುಲಪತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ನಿಧಾನವಾಗಿಯಾದರೂ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಜೈನಾಲಜಿ ವಿಭಾಗದ ಕಟ್ಟಡ, ಬೆಂಗಳೂರಿನಲ್ಲಿ ಸಂಸ್ಕೃತ ವಿವಿ ಕಟ್ಟಡ ಬರಲು ನಾನು ಕಾರಣ.
- ಪ್ರೊ.ಪದ್ಮಾ ಶೇಖರ್, ವಿಶ್ರಾಂತ ಕುಲಪತಿ, ಸಂಸ್ಕೃತ ವಿವಿ----
ನಾನು ರಂಗಭೂಮಿಯ ಜೊತೆಗೆ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿಕೊಂಡು ಬಂದವನು. ನಮ್ಮ ಆಲೋಚನೆಗಳಿಗೆ ತಕ್ಕಂತೆ ಇರುವ ಸರ್ಕಾರ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತೋಷ. ಇದು ನನ್ನೊಬ್ಬನಿಗೆ ಸಂದ ಪ್ರಶಸ್ತಿ ಅಲ್ಲ. ಇಡೀ ಸಮುದಾಯಕ್ಕೆ ಸಂದ ಗೌರವ.ಎಚ್. ಜನಾರ್ಧನ್, ಮಾಜಿ ನಿರ್ದೇಶಕರು, ರಂಗಾಯಣ
----ಗುಬ್ಬಿ ವೀರಣ್ಣನವರ ಕಾಲದಿಂದಲೂ ವೃತ್ತಿ ರಂಗಭೂಮಿಯಲ್ಲಿ ಕ್ಲಾರಿಯೋನೆಟ್ ವಾದಕನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. 85ರ ಈ ಇಳಿ ವಯಸ್ಸಿನಲ್ಲಿ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದರಿಂದ ಖುಷಿಯಾಗಿದೆ.
- ಡಿ.ರಾಮು, ಹಿರಿಯ ಕ್ಲಾರಿಯೋನೆಟ್ ವಾದಕ----
ನಾನು ಕೆ. ವೆಂಕಟಲಕ್ಷ್ಮಮ್ಮ ಅವರ ಶಿಷ್ಯೆ. ಈಗ 79 ವರ್ಷ. ಈಗ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತೋಷವಾಗಿದೆ.- ಲಲಿತರಾವ್, ಶಾಂತಲಾ ನೃತ್ಯಕಲಾನಿಕೇತನ