ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕಿನ ಗಾವಡಗೆರೆಯ ಶ್ರೀ ಗುರುಲಿಂಗಜಂಗಮ ದೇವರಮಠದ ಶ್ರೀ ನಟರಾಜ ಸ್ವಾಮೀಜಿಗಳ 50ನೇ ವರ್ಷದ ಚರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಸಮಾರಂಭವು ಶಾಸಕ ಜಿ.ಡಿ.ಹರೀಶ್ ಗೌಡ ಅವರ ಅಧ್ಯಕ್ಷತೆಯಲ್ಲಿ ಫೆ.13 ಮತ್ತು 14ರಂದು ಆಯೋಜಿಸಿದೆ ಎಂದು ಶ್ರೀಮಠದ ಭಕ್ತರು ಮತ್ತು ಉದ್ಯಮಿ ಹರವೆ ಶ್ರೀಧರ್ ಹೇಳಿದರು.ಶ್ರೀಗಳು ಮಠದ ಪಟ್ಟಾಧಕಾರ ವಹಿಸಿದ ನಂತರ ಶ್ರೀಮಠದ ಸರ್ವಾಂಗಿಣ ಅಭಿವೃದ್ಧಿಗಾಗಿ ಸಮಾಜದ ಎಲ್ಲ ವರ್ಗದವರನ್ನು ಸಮನಾಗಿ ಸ್ವೀಕರಿಸಿ ಜಾತ್ಯತೀತ ತಳಹದಿಯಲ್ಲಿ ಮಠದ ಸೇವಾ ಕಾರ್ಯ ನಡೆಸಿದ್ದು, ಶ್ರೀಮಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಅಕ್ಷರ ದಾಸೋಹ ನೀಡಲಾಗುತ್ತಿದ್ದು, ಆದಿವಾಸಿ ಗಿರಿಜನರ ಮಕ್ಕಳಿಂದ ಆರಂಭಗೊಂಡು ಉತ್ತರ ಕರ್ನಾಟಕದ ಭಾಗದ ಕೃಷಿಕ ಕುಟುಂಬ ಒಳಗೊಂಡು ಬಡಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಅವರು ತಿಳಿಸಿದರು.
ಫೆ 13ರ ಬೆಳಗ್ಗೆ 10.30ಕ್ಕೆ ವಾಟಾಳು ಸೂರ್ಯಸಿಂಹಾಸನಾ ಮಠದ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಷಟ್ ಸ್ಥಲ ಧ್ವಜಾರೋಹಣದೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕುಂದೂರು ಮಠದ ಶ್ರೀ ಶರಶ್ಚಂದ್ರ ಸ್ವಾಮೀಜಿ ಆಶಯದ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 3ಕ್ಕೆ ಆಯೋಜನೆಗೊಂಡಿರುವ ಧಾರ್ಮಿಕ ಸಭೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಮೂರು ಸಾವಿರ ಕಂಬ ಮಠದ ಹುಬ್ಬಳ್ಳಿ ಗುರುಸಿದ್ದರಾಜ ಯೋಗೇಂದ್ರ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ ಸೇರಿದಂತೆ ಕೇಂದ್ರ ರೇಲ್ವೆ ರಾಜ್ಯ ಸಚಿವ ಸೋಮಣ್ಣ, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಚಿವ ಕೆ. ವೆಂಕಟೇಶ್, ಈಶ್ವರ್ ಖಂಡ್ರೆ, ಶಾಸಕರಾದ ಜಿ.ಟಿ. ದೇವೇಗೌಡ, ಎಚ್. ವಿಶ್ವನಾಥ್, ಡಾ. ಯತೀಂದ್ರ ಸಿದ್ದರಾಮಯ್ಯ, ಡಿ. ರವಿಶಂಕರ್, ಗಣೇಶ್ ಪ್ರಸಾದ್, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಭಾಗವಹಿಸಲಿದ್ದಾರೆ.ಫೆ. 14ರ ಬೆಳಗ್ಗೆ ಮಲ್ಲನಮೂಲೆ ಕಂಬಳೀಶ್ವರ ಮಠದ ಚೆನ್ನಬಸವ ಸ್ವಾಮೀಜಿ ಅವರಿಂದ ಧ್ವಜಾರೋಹಣ ನಡೆಯಲಿದ್ದು, ಮೋಟಗಿ ಮಠದ ಶ್ರೀ ಪ್ರಭುಚೆನ್ನಬಸವ ಸ್ವಾಮಿಗಳು ಆಶಯದ ನುಡಿಗಳನ್ನಾಡಲಿದ್ದರೆ. 10.30ಕ್ಕೆ ಧಾರ್ಮಿಕ ಸಭೆ ಆಯೋಜನೆಗೊಂಡಿದ್ದು, ಶ್ರೀ ಶಿವರಾತ್ರಿದೇಶಿಕೇಂದ್ರದ ಸ್ವಾಮೀಜಿ, ಡಾ. ನಿರ್ಮಲಾನಂದ ಸ್ವಾಮೀಜಿ, ವೀರೇಂದ್ರ ಹೆಗ್ಗಡೆ, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಜಿ.ಡಿ. ಹರೀಶ್ ಗೌಡ ವಹಿಸುವರು.
ಅಂತಾರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಭಾರತದ ವಿಜಯಪತಾಕೆ ಹಾರಿಸಿದ ಟಿ. ನರಸೀಪುರದ ಪ್ರತಿಭೆ ಚೈತ್ರಾ ಅವರನ್ನು ಸನ್ಮಾನಿಸಲಾಗುವುದು.ಮಠದ ಆವರಣದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ. ಸುವರ್ಣ ಮಹೋತ್ಸವದ ಅಂಗವಾಗಿ ಫೆ. 13ರಂದು ಸಂಜೆ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಮತ್ತವರ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದೆ ಎಂದು ಮಾಹಿತಿ ನೀಡಿದರು. ಜಗದೀಶ್, ಶಿವಣ್ಣ, ಶಿವಕುಮಾರ್ ಇದ್ದರು.