ಕನಸು, ಪರಿಶ್ರಮ, ನಂಬಿಕೆ, ಸವಾಲುಗಳನ್ನು ಮೆಟ್ಟಿ ನಿಂತು ಐದು ದಶಕಗಳ ಯಶಸ್ವಿ ಸೇವೆಯನ್ನು ಪೂರೈಸಿದ ‘ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್’ನ ಸುವರ್ಣ ಮಹೋತ್ಸವ ಸಮಾರಂಭ ಮೈಸೂರಿನಲ್ಲಿ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕನಸು, ಪರಿಶ್ರಮ, ನಂಬಿಕೆ, ಸವಾಲುಗಳನ್ನು ಮೆಟ್ಟಿ ನಿಂತು ಐದು ದಶಕಗಳ ಯಶಸ್ವಿ ಸೇವೆಯನ್ನು ಪೂರೈಸಿದ ‘ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್’ನ ಸುವರ್ಣ ಮಹೋತ್ಸವ ಸಮಾರಂಭ ಮೈಸೂರಿನಲ್ಲಿ ಸಂಭ್ರಮದಿಂದ ಜರುಗಿತು.

ಸಂಸ್ಥೆಯ ಸುವರ್ಣ ಮಹೋತ್ಸವದ ಜತೆಗೆ ನಗರದ ಬನ್ನಿಮಂಟಪ ಬಡಾವಣೆಯ ಜೋಡಿ ತೆಂಗಿನಮರ ರಸ್ತೆ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಆರ್‌ಎಲ್ ಕಟ್ಟಡ, ಬೃಹತ್ ಗೋದಾಮು ಕಟ್ಟಡ ಲೋಕಾರ್ಪಣೆಯನ್ನು ಸಹ ಇದೇ ವೇಳೆ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ವಿಭಿನ್ನ ಆಲೋಚನೆಯ ಫಲ:

ವಿಆರ್‌ಎಲ್ ಸಂಸ್ಥೆಯ ಆರಂಭದ ದಿನಗಳನ್ನು ಸ್ಮರಿಸಿದ ಡಾ.ವಿಜಯ ಸಂಕೇಶ್ವರ, ನನ್ನ ತಂದೆ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕುಟುಂಬದ ಎಲ್ಲರೂ ಒಂದೇ ಕ್ಷೇತ್ರದಲ್ಲಿ ಮುಂದುವರಿಯುವ ಬದಲು, ವಿಭಿನ್ನ ಕ್ಷೇತ್ರದಲ್ಲಿ ಹೆಜ್ಜೆ ಇಡಬೇಕು ಎಂಬ ಆಲೋಚನೆಯಿಂದ ವಿಆರ್‌ಎಲ್ ಸಂಸ್ಥೆಯನ್ನು ಆರಂಭಿಸಲಾಯಿತು. 10 ವರ್ಷಗಳ ಕಾಲ ನಿರಂತರ ನಷ್ಟ ಹಾಗೂ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆದರೆ, ಆ ಸಂಕಷ್ಟದ ದಿನಗಳಲ್ಲಿಯೂ ಸೇವೆಯ ಗುಣಮಟ್ಟ ಹಾಗೂ ಆರ್ಥಿಕ ಶಿಸ್ತಿನಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಮ್ಮ ಕಾರ್ಯವೈಖರಿಯನ್ನು ಜನರು ಗುರುತಿಸಿ, ವಿಶ್ವಾಸವಿಟ್ಟು ಆಶೀರ್ವದಿಸಿದರು. ಅವರ ಬೆಂಬಲವೇ ನಮಗೆ ಬೆನ್ನುತಟ್ಟಿ ಮುನ್ನಡೆಯುವ ಶಕ್ತಿ ನೀಡಿತು ಎಂದು ಸ್ಮರಿಸಿದರು.

ದೇಶದಲ್ಲಿಯೇ ಅತಿ ಹೆಚ್ಚು ವಾಹನಗಳನ್ನು ಹೊಂದಿರುವ ಸಂಸ್ಥೆ ನಮ್ಮದಾಗಿದೆ. ಟ್ರಕ್ ಹಾಗೂ ಬಸ್ ಸೇರಿ 7,000 ವಾಹನಗಳಿವೆ. ದೇಶದಲ್ಲಿ 1,300 ಶಾಖೆಗಳಿವೆ. ಶ್ರೀನಗರದಿಂದ ತಿರುವನಂತಪುರಂವರೆಗೆ ನಮ್ಮ ಸೇವೆ ವಿಸ್ತರಿಸಿದೆ. ಇದು ಸಾಧ್ಯವಾಗಿದ್ದು ನಮ್ಮ ಸಮರ್ಪಣಾ ಮನೋಭಾವದಿಂದ. ಕೆಲಸ ಮಾಡುವ ಸಿಬ್ಬಂದಿಯ ಸೇವೆಯಿಂದ ಎಂದು ಹೇಳಿದರು.

ಆರ್ಥಿಕ ಶಿಸ್ತು ಯಶಸ್ಸಿನ ಮೂಲ:

ವಿಆರ್‌ಎಲ್ ಸಮೂಹ ಸಂಸ್ಥೆ ಬೆಳೆದು ಬಂದ ಕಠಿಣ ಹಾದಿಯನ್ನು ವಿವರಿಸಿದ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಲಾಜಿಸ್ಟಿಕ್ಸ್ ಕಂಪನಿ ನಡೆಸುವುದು ಅತ್ಯಂತ ಸವಾಲಿನ ವಿಚಾರ. ಟೆಲಿಫೋನ್ ಕೂಡ ಸರಿಯಾಗಿ ಸಿಗದ ಆ ದಿನಗಳಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಮನೆ, ಮನೆ ಪ್ರಚಾರ ಮಾಡಿದ ಉದಾಹರಣೆಗಳಿವೆ. ಇವತ್ತಿನ ಸ್ಮಾರ್ಟ್ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದೆ. ಆದರೆ, ನನ್ನ ತಂದೆ ಈ ಸಂಸ್ಥೆ ಪ್ರಾರಂಭಿಸಿದಾಗ ಇಂತಹ ಯಾವುದೇ ವ್ಯವಸ್ಥೆ ಇಲ್ಲದೆಯೂ ಅವರು ವಿಆರ್‌ಎಲ್ ಅನ್ನು ಯಶಸ್ವಿಯಾಗಿ ಕಟ್ಟಿದರು ಎಂದು ಡಾ.ವಿಜಯ ಸಂಕೇಶ್ವರ ಅವರ ಸಾಧನೆಯನ್ನು ಸ್ಮರಿಸಿದರು.