ಸಾರಾಂಶ
ಗೋಳಿತ್ತಟ್ಟು ದ.ಕ.ಜಿ.ಪ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆ ಇದೆ, ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿ, ಕಲಿಯುವ ಮಕ್ಕಳನ್ನು ಪ್ರಕಾಶಿಸುವಂತೆ ಮಾಡಿ, ತನ್ಮೂಲಕ ತನ್ನ ಮತ್ತು ಕುಟುಂಬದಲ್ಲಿನ ಬಡತನವನ್ನು ದೂರ ಮಾಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.ಅವರು ಶನಿವಾರ ಗೋಳಿತ್ತಟ್ಟು ದ.ಕ.ಜಿ.ಪ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವಂತಿದೆ, ಅದು ಸಲ್ಲದು, ತಮ್ಮ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಪೋಷಕರು ಅದರಲ್ಲೂ ತಾಯಂದಿರು ತಮ್ಮ ಮಕ್ಕಳಿಗಾಗಿ ಸಮಯ ಕೊಡಬೇಕು. ಈ ರೀತಿಯಾದಾಗ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡುತ್ತದೆ, ಮುಂದೊಂದು ದಿನ ಆತ ದೊಡ್ಡ ಸ್ಥಾನಕ್ಕೆ ಏರಿದರೆ ಪೋಷಕರ ಪಾಲಿಗೆ ಬೇರೆ ಯಾವುದೇ ಆಸ್ತಿ ಮಾಡಬೇಕಾಗಿಲ್ಲ, ಮಕ್ಕಳೇ ಆಸ್ತಿಯಾಗಿ ತಮ್ಮ ಬಡತನವನ್ನು ದೂರ ಮಾಡಬಲ್ಲರು ಮತ್ತು ಊರು ಅಭಿವೃದ್ಧಿ ಹೊಂದುವುದರಲ್ಲಿಯೂ ಯಾವುದೇ ಸಂಶಯ ಇಲ್ಲ ಎಂದರು. ಗೋಳಿತ್ತಟ್ಟುವಿನ ಕೋಲ್ಪೆ ತನ್ನ ತಾಯಿ ಊರು, ಚಿಕ್ಕವನಿದ್ದಾಗ ತಾಯಿಯ ಜೊತೆ ಇಲ್ಲಿಗೆ ಬಂದು ಇಲ್ಲಿನ ಮೈದಾನದಲ್ಲಿ ಆಟವಾಡುತ್ತಿದ್ದುದನ್ನು ಮೆಲುಕು ಹಾಕಿದ ಯು.ಟಿ. ಖಾದರ್ ಶಾಲೆಯ ಕೊಠಡಿ ನಿರ್ಮಾಣಕ್ಕೆ 12 ಲಕ್ಷ ರು. ಸರ್ಕಾರದಿಂದ ಕೊಡಿಸುವ ಬಗ್ಗೆ ಭರವಸೆ ನೀಡಿದರು. ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಯ ಅಭಿವೃದ್ಧಿ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದು, ಬಡವರ ಮಕ್ಕಳ ಕಲಿಕೆಗೆ ಬಹಳಷ್ಟು ಸಹಕಾರಿ ಆಗಿದೆ, ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕು ಎಂದರು.ಗೋಳಿತ್ತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಬಾಬು ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ದನ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಜೀವಿತ, ಗುಲಾಬಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ ಗೌಡ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಉಪಾಧ್ಯಕ್ಷ ನಾಸಿರ್ ಸಮರಗುಂಡಿ, ಕೋಶಾಧಿಕಾರಿ ಜನಾರ್ದನ ಗೌಡ, ಸ್ಥಳೀಯ ಪ್ರಮುಖರಾದ ಅಬ್ದುಲ್ಲ ಕುಂಞ್, ಅಜಿತ್ ಕುಮಾರ್ ಪಾಲೇರಿ, ಕೆ.ಕೆ. ಇಸ್ಮಾಯಿಲ್, ನಝೀರ್ ಮಠ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಅಬ್ದುಲ್ ಲತೀಫ್ ಕಾರ‍್ಯಕ್ರಮ ನಿರೂಪಿಸಿದರು.