ಗೊಲ್ಲರು-ಕಾಡುಗೊಲ್ಲ ಹೆಣ್ಣುಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ: ಬಸವಂತಪ್ಪ ಆಗ್ರಹ

| Published : Mar 06 2025, 12:31 AM IST

ಗೊಲ್ಲರು-ಕಾಡುಗೊಲ್ಲ ಹೆಣ್ಣುಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ: ಬಸವಂತಪ್ಪ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗೊಲ್ಲರು ಮತ್ತು ಕಾಡುಗೊಲ್ಲ ಸಮುದಾಯದ ಹೆಣ್ಣುಮಕ್ಕಳಿಗೆ ಸಂಪ್ರದಾಯದ ವಿಚಾರದಲ್ಲಿ ಆಗುತ್ತಿರುವ ಸಾಮಾಜಿಕ ಅಡೆತಡೆ ಹಾಗೂ ಆರೋಗ್ಯ ತೊಂದರೆಗಳ ಕುರಿತು ಸರ್ಕಾರ ಜಾಗೃತಿ ಮೂಡಿಸಬೇಕು. ಅವರನ್ನು ಸರ್ಕಾರ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹಿಸಿದ್ದಾರೆ.

-

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗೊಲ್ಲರು ಮತ್ತು ಕಾಡುಗೊಲ್ಲ ಸಮುದಾಯದ ಹೆಣ್ಣುಮಕ್ಕಳಿಗೆ ಸಂಪ್ರದಾಯದ ವಿಚಾರದಲ್ಲಿ ಆಗುತ್ತಿರುವ ಸಾಮಾಜಿಕ ಅಡೆತಡೆ ಹಾಗೂ ಆರೋಗ್ಯ ತೊಂದರೆಗಳ ಕುರಿತು ಸರ್ಕಾರ ಜಾಗೃತಿ ಮೂಡಿಸಬೇಕು. ಅವರನ್ನು ಸರ್ಕಾರ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹಿಸಿದರು.

ವಿಧಾನಸೌಧದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಶಾಸಕ ಶಿವಲಿಂಗೇಗೌಡ ಈ ವಿಷಯ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಈ ಸಮುದಾಯದಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆ ಹಾಗೂ ಹಲವು ಸಂಪ್ರದಾಯದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ಹಿಂದುಳಿದ ವರ್ಗಗಳ ಇಲಾಖೆ ಮೂಲಕ ಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ಪ್ರತಿವರ್ಷ ಇಂತಿಷ್ಟು ಅನುದಾನವನ್ನೂ ಮೀಸಲಿಡುತ್ತಿದೆ. ಆದರೆ, ಮೌಢ್ಯತೆಗೆ ಒಳಗಾಗಿರುವ ಸಮುದಾಯವನ್ನು ಶಾಶ್ವತವಾಗಿ ಹೊರತರಲು ಆಗಿಲ್ಲ. ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಮನವಿ ಮಾಡಿದರು.

ಕೆಲ ವರ್ಷಗಳ ಹಿಂದೆ ಗೊಲ್ಲರು ಮತ್ತು ಕಾಡುಗೊಲ್ಲ ಸಮುದಾಯದಲ್ಲಿ ಋತುಮತಿಯಾದ ಹೆಣ್ಣುಮಕ್ಕಳನ್ನು ಹೊರಕ್ಕೆ ಕೂರಿಸುತ್ತಿದ್ದ ಕುರಿತು ಸಾಕಷ್ಟು ಚರ್ಚೆಗಳಾಗಿದ್ದವು. ಈಗ ಬಾಣಂತಿ ಹಾಗೂ ಎಳೆಯ ಮಕ್ಕಳನ್ನು ಮನೆಯಿಂದ ಹೊರಗಿಡುವ ಬಗ್ಗೆ ವರದಿಗಳು ಕೂಡ ಬರುತ್ತಿವೆ. ಈ ಸಮಾಜದ ಅಭಿವೃದ್ಧಿಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಆದರೆ ಇನ್ನೂ ಸಮಾಜ ಅಭಿವೃದ್ಧಿ ಆಗಿಲ್ಲ. ನಿಗಮದ ಮೂಲಕ ಸಾಲಸೌಲಭ್ಯ ನೀಡಬೇಕು, ಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಮೌಢ್ಯದಿಂದ ಸರ್ಕಾರ ಮುಕ್ತಿ ದೊರಕಿಸಬೇಕು ಎಂದು ಒತ್ತಾಯಿಸಿದರು.

- - -