ಕೂಡ್ಲಿಗಿ ತಾಲೂಕಿನ ಗೊಲ್ಲರಹಟ್ಟಿ ಅಂಗನವಾಡಿಗೆ 6 ತಿಂಗಳ ಹಿಂದೆ ಹಾಕಿದ್ದ ಬೀಗ ತೆರವು

| Published : Jan 03 2025, 12:33 AM IST

ಕೂಡ್ಲಿಗಿ ತಾಲೂಕಿನ ಗೊಲ್ಲರಹಟ್ಟಿ ಅಂಗನವಾಡಿಗೆ 6 ತಿಂಗಳ ಹಿಂದೆ ಹಾಕಿದ್ದ ಬೀಗ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮೂರಿನ ಅಂಗನವಾಡಿಗೆ ಗ್ರಾಮದವರೇ ಕಾರ್ಯಕರ್ತೆ ಆಗಬೇಕು ಎಂದು ಪಟ್ಟುಹಿಡಿದು ಆರು ತಿಂಗಳಿಂದ ಮುಚ್ಚಿದ್ದ ಕೂಡ್ಲಿಗಿ ತಾಲೂಕಿನ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಬಾಗಿಲನ್ನು ಅಧಿಕಾರಿಗಳು ತೆಗೆಸಿದ್ದಾರೆ.

ಕೂಡ್ಲಿಗಿ: ತಮ್ಮೂರಿನ ಅಂಗನವಾಡಿಗೆ ಗ್ರಾಮದವರೇ ಕಾರ್ಯಕರ್ತೆ ಆಗಬೇಕು ಎಂದು ಪಟ್ಟುಹಿಡಿದು ಆರು ತಿಂಗಳಿಂದ ಮುಚ್ಚಿದ್ದ ತಾಲೂಕಿನ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಬಾಗಿಲನ್ನು ಅಧಿಕಾರಿಗಳು ತೆಗೆಸಿದ್ದಾರೆ.

ಗುರುವಾರ ಪೊಲೀಸ್ ಬಂದೋಬಸ್ತ್ ಪಡೆದು, ಕೂಡ್ಲಿಗಿ ಶಿಶು ಕಲ್ಯಾಣ ಯೋಜನಾಧಿಕಾರಿಗಳು, ಗ್ರಾಮಸ್ಥರ ಮನವೊಲಿಸಿ ಅಂಗನವಾಡಿ ಕೇಂದ್ರದ ಬೀಗ ತೆಗೆಸಿದ್ದಾರೆ. ಅಷ್ಟಾದರೂ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ಪಾಲಕರು ಹೇಳಿದ್ದಾರೆ.

ನಡೆದಿದ್ದೇನು?: ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆದು ಪಕ್ಕದೂರಿನ ಮಹಿಳೆ ಆಯ್ಕೆಯಾಗಿದ್ದರು. ಅದಕ್ಕೆ ಗ್ರಾಮಸ್ಥರು ಒಪ್ಪಿರಲಿಲ್ಲ. ತಮ್ಮೂರಿನವರೇ ಕಾರ್ಯಕರ್ತೆ ಆಗಬೇಕು ಎಂದು ವಾದಿಸಿದ್ದರು. ಅಲ್ಲದೆ ಅಂಗನವಾಡಿಗೆ ಬೀಗ ಹಾಕಿದ್ದರು. ಆರು ತಿಂಗಳಿಂದ ಅಂಗನವಾಡಿ ಬಂದ್‌ ಇತ್ತು.

ಕಾರ್ಯಾಚರಣೆ: ಗುರುವಾರ ಕೂಡ್ಲಿಗಿ ಸಿಡಿಪಿಒ ಮಾಲುಂಬಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸರ ಸಹಾಯ ಪಡೆದು ಗ್ರಾಮಕ್ಕೆ ಆಗಮಿಸಿದರು. ಗ್ರಾಮಸ್ಥರ ಮನವೊಲಿಸಲು ಮುಂದಾದರು. ಆಗ ಗ್ರಾಮಸ್ಥರು, ಹಿಂದೆ ಈ ಅಂಗನವಾಡಿಯಲ್ಲಿ ತಾತ್ಕಾಲಿಕ ಗೌರವಧನದ ಆಧಾರದ ಮೇಲೆ ಏಳು ತಿಂಗಳು ಕೆಲಸ ಮಾಡಿದ ಕುಸುಮಾ ಎಂಬವರನ್ನೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಆಗ ಸಿಡಿಪಿಒ ಮಾಲುಂಬಿ ಅವರು ಸರ್ಕಾರದ ಆದೇಶದಂತೆ ನೇಮಕ ಮಾಡಲಾಗಿದೆ. ಪಕ್ಕದ ಊರಿನವರನ್ನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಕರ್ತೆ ಮನೆ ಇರಬೇಕು. ಚೆಂಚನಹಳ್ಳಿ ಶಾಂಭಕ್ಕ ಎಂಬವರನ್ನು ನೇಮಕ ಮಾಡಲಾಗಿದೆ. ಕೆಂಚಮಲ್ಲನಹಳ್ಳಿ ಮೂರು ಕಿಲೋ ಮೀಟರ್ ಒಳಗೆ ಇರುವುದರಿಂದ ಶಾಂಭಕ್ಕ ಅವರನ್ನು ಮುಂಬಡ್ತಿ ನೀಡಿ ನಿಮ್ಮೂರಿಗೆ ಕಾರ್ಯಕರ್ತೆಯಾಗಿ ಆಯ್ಕೆಮಾಡಲಾಗಿದೆ ಎಂದು ಗ್ರಾಮಸ್ಥರಿಗೆ ಕಾನೂನು ಬಗ್ಗೆ ತಿಳಿವಳಿಕೆ ನೀಡಿದರು.

ಆಗ ಗ್ರಾಮಸ್ಥರು, ಬೀಗ ತೆಗೆದುಕೊಳ್ಳಿ, ಆದರೆ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಲೂರು ಪಿಡಿಒ ಮಂಜುನಾಥ, ಮೇಲ್ವಿಚಾರಕಿ ದುರುಗಮ್ಮ, ಪೇದೆಗಳಾದ ವಿಜಯಕುಮಾರ್, ಚೈತನ್ಯ, ಕಾರ್ಯಕರ್ತೆಯರಾದ ಚಂದ್ರಮ್ಮ, ಶಾಂಭಕ್ಕ, ಅನಂತ ಇದ್ದರು.

ಕನ್ನಡಪ್ರಭ ವರದಿ: ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವ ಕುರಿತು ಕನ್ನಡಪ್ರಭದಲ್ಲಿ ಜ. 1ರಂದು ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಅಂಗನವಾಡಿ ಕೇಂದ್ರದ ಬೀಗ ತೆರೆಸಿದ್ದಾರೆ.ಕನ್ನಡಪ್ರಭ ವರದಿ ಗಮನಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಗುರುವಾರ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿಗೆ ನಾನು ಹೋಗಿ ಬಂದಿದ್ದೇನೆ. ನಿಮ್ಮ ತಕರಾರು ಇದ್ದರೆ ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಿಕೊಳ್ಳಿ ಅದನ್ನು ಬಿಟ್ಟು ಈ ರೀತಿ ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪು ಎಂದು ತಿಳಿಸಿದ್ದೇನೆ ಎಂದು ಕೂಡ್ಲಿಗಿ ಸಿಡಿಪಿಒ ಮಾಲುಂಬಿ ಹೇಳಿದರು.