ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಗೋಮಾಳಕ್ಕೆ ಸೇರಿರುವ ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಿರುವ ಅಧಿಕಾರಿಗಳ ಕ್ರಮ ಖಂಡಿಸಿ ಕುಶಾಲನಗರ ಬೈಚನಹಳ್ಳಿ ಗೆಳೆಯರ ಬಳಗದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಕುಶಾಲನಗರದ ಬೈಚನಹಳ್ಳಿ ಗ್ರಾಮದ ಸರ್ವೆ ನಂಬರ್ 2/1 ರ 9.38 ಎಕರೆ ಪ್ರದೇಶದ ಗೋಮಾಳ ಜಾಗದಲ್ಲಿ ಕಾನೂನುಬಾಹಿರವಾಗಿ ಅನ್ಯ ಸಮುದಾಯದ ವ್ಯಕ್ತಿಗಳಿಗೆ ಸ್ಮಶಾನಕ್ಕೆ ಜಾಗ ಕಾಯ್ದಿರಿಸಿದ ಬಗ್ಗೆ ಬಳಗದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿ ಸ್ಮಶಾನಕ್ಕೆ ಜಾಗ ನೀಡಿರುವ ಸ್ಥಳದಲ್ಲೇ ಪ್ರತಿಭಟನೆ ಮಾಡಿ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ಕಳೆದ ಹಲವಾರು ವರ್ಷಗಳಿಂದ ಈ ಜಾಗದ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ನ್ಯಾಯಾಲಯದ ಆದೇಶಕ್ಕೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಕಂದಾಯ ಅಧಿಕಾರಿ ಸಂತೋಷ್ ಮತ್ತು ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು.
ಸಮರ್ಪಕ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸಿಲ್ದಾರ್ ಅಥವಾ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಮಧ್ಯಾಹ್ನ ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಸಿಲ್ದಾರ್ ಕಿರಣ್ ಗೌರಯ್ಯ ಈ ಬಗ್ಗೆ ಸಂಪೂರ್ಣ ಕಡತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸಮಾಧಾನಗೊಂಡು ಪ್ರತಿಭಟನೆ ಹಿಂತೆಗೆದುಕೊಂಡರು.
ಸ್ಥಳದಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಸದಂತೆ ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ಪ್ರತಿಭಟನಾಕಾರರಿಗೆ ತಿಳಿಸಿದರು.ಕುಶಾಲನಗರ ಪುರಸಭೆ ಸದಸ್ಯ ಅಮೃತರಾಜ್, ಜಗದೀಶ, ಡಿ ಕೆ ತಿಮ್ಮಪ್ಪ, ಎಂ ಬಿ ಸುರೇಶ್ , ವಿಶ್ವ ಹಿಂದೂ ಪರಿಷತ್ ಪ್ರಮುಖ ಸಂತೋಷ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ಎಸ್ ಅಶೋಕ್ ಮತ್ತು ಬಳಗದ ಅಧ್ಯಕ್ಷ ಶ್ರೀಕಾಂತ್, ಪ್ರಮುಖರಾದ ಮಣಿ, ಸಿದ್ದು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದ ಅಧಿಕಾರಿಗಳ ಮೇಲೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬೈಚನಹಳ್ಳಿಯ ಸುತ್ತಮುತ್ತ ವ್ಯಾಪ್ತಿಯ ಹಿರಿಯರು, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.