ಸಾರಾಂಶ
ಚಿಕ್ಕಮಗಳೂರು, ನಗರದ ಕೋಟೆ ಬಡಾವಣೆ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವಥ್ಥ ನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಅವರ ಮನೆ ಯಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ.
ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಯದು ವಂಶಸ್ಥರ ಪರಂಪರೆಯ ಪಟ್ಟದ ಗೊಂಬೆಗಳು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಕೋಟೆ ಬಡಾವಣೆ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವಥ್ಥ ನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಅವರ ಮನೆ ಯಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ.
ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಯದು ವಂಶಸ್ಥರ ಪರಂಪರೆಯ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂ ಸವಾರಿ, ವಿಶ್ವ ವಿಖ್ಯಾತ ಮೈಸೂರು ಅರಮನೆ, ಯದು ವಂಶಸ್ಥರ ಸಾಂಪ್ರದಾಯಿಕ ಆಚರಣೆಗಳ ವೈಭವವನ್ನು ಪ್ರದರ್ಶಿಸುತ್ತಿದ್ದರೆ, ಇನ್ನೂ ಕೆಲವು ಗೊಂಬೆಗಳು ಶ್ರೀರಾಮಲಲ್ಲಾ, ಅಷ್ಟ ಲಕ್ಷ್ಮಿಯರು ಸೇರಿದಂತೆ ವಿವಿಧ ದೇವತೆಗಳ ವಿವಿಧ ಭಂಗಿಗಳನ್ನು ತೆರೆದಿಟ್ಟಿವೆ.ಕಲಿಯುಗದ ದೈವ ಪದ್ಮಾವತಿ ಹಾಗೂ ಶ್ರೀನಿವಾಸನ ವಿವಾಹದ ವೈಭವ ಸಾರುವ ಶ್ರೀನಿವಾಸ ಕಲ್ಯಾಣದ ಗೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ. ವರನ ದಿಬ್ಬಣ ಎದುರುಗೊಳ್ಳುವುದು, ವರ ಪೂಜೆ, ಮಾಂಗಲ್ಯಧಾರಣೆ, ಲಾಜಾ ಹೋಮ, ಸಪ್ತಪದಿ ತುಳಿಯುವುದು ಸೇರಿದಂತೆ ವಿವಾಹದ ವಿಧಿ ವಿಧಾನಗಳನ್ನು ಪರಿಚಯಿಸುತ್ತಿವೆ.ತಿರುಮಲ ತಿರುಪತಿ ಸಪ್ತಗಿರಿ ಬೆಟ್ಟ, ಅಲ್ಲಿನ ಪ್ರಕೃತಿ ಸೌಂದರ್ಯ, ಶ್ರೀ ವೆಂಕಟೇಶ್ವರ ದೇವಾಲಯದ ಸ್ತಬ್ದ ಚಿತ್ರ, ದೇವತೆಗಳು ಮತ್ತು ರಾಕ್ಷಸರ ನಡುವಿನ ಅಮೃತ ಮಥನದ ದೃಶ್ಯಗಳು, ಪ್ರಾಚೀನ ಕಾಲದ ಗುರುಕುಲ ಪದ್ಧತಿ ಗೊಂಬೆಗಳು ಗಮನ ಸೆಳೆಯುತ್ತಿವೆ.ಭಗವಾನ್ ಶ್ರೀ ಕೃಷ್ಣ ಗೋವರ್ಧನಗಿರಿಯನ್ನು ತನ್ನ ಬೆರಳಿನಲ್ಲಿ ಎತ್ತಿ ಹಿಡಿದು ಗೋವುಗಳು ಮತ್ತು ಗೋಪಾಲಕರನ್ನು ರಕ್ಷಿಸುವ ದೃಶ್ಯ, ಕೈಲಾಸದಲ್ಲಿ ಬ್ರಹ್ಮ, ವಿಷ್ಣು, ನಂದಿ, ಬೃಂಗಿ, ಶಿವಗಣಗಳು ಋಷಿಮುನಿಗಳ ನಡುವೆ ಶಿವ ಪಾರ್ವತಿ ಒಡ್ಡೋಲಗದ ದೃಶ್ಯ ಕಣ್ಮನ ಸೆಳೆಯುತ್ತಿವೆ.ಭಗವಾನ್ ಶ್ರೀ ಕೃಷ್ಣನ ಗೀತೋಪದೇಶದ ಗೊಂಬೆಗಳು, ಮಹಾ ವಿಷ್ಣುವಿನ ದಶಾವತಾರದ ಗೊಂಬೆಗಳು, ಅಯೋಧ್ಯೆ ಶ್ರೀರಾಮನ ವಿಗ್ರಹ, ಕೃಷಿ ಚಟುವಟಿಕೆ, ಸಂತೆಯ ದೃಶ್ಯ, ಭಾರತೀಯ ಹಬ್ಬ ಹರಿದಿನಗಳ ಆಚರಣೆಗಳನ್ನು ತೆರೆದಿಡುವ ನೂರಾರು ಗೊಂಬೆಗಳು ನಾಡಿನ ಭವ್ಯ ಪರಂಪರೆ ಮತ್ತು ಸಂಸ್ಕೃತಿ ಬಿಂಬಿಸುತ್ತಿವೆ.ಪಟ್ಟದ ಗೊಂಬೆಗಳ ಕುರಿತು ವಿವರಿಸಿದ ಅನುರಾಧಾ ಜೋಶಿ ನವರಾತ್ರಿಯ ಪಟ್ಟದ ಗೊಂಬೆಗಳು ತಮ್ಮ ತವರಿನ ಬಳುವಳಿಯಾಗಿದ್ದು, ತಮ್ಮ ತವರು ಮನೆಯ ನವರಾತ್ರಿ ಹಬ್ಬದ ಸಂಪ್ರದಾಯವನ್ನು ತಾವು ಪತಿಯ ಸಹಕಾರ ಮತ್ತು ಪ್ರೋತ್ಸಾಹದಿಂದ ಮುಂದುವರಿಸಿಕೊಂಡು ಬರುತ್ತಿದ್ದು, ನಮ್ಮ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ಹೇಳಿದರು.ಪುರೋಹಿತ ಅಶ್ವಥ್ಥ ನಾರಾಯಣಚಾರ್ಯ ವಸಂತಾಚಾರ್ಯ ಜೋಶಿ ಮಾತನಾಡಿ, ಆಧುನಿಕತೆ ಭರದಲ್ಲಿ ನಮ್ಮ ಮಕ್ಕಳು ಮತ್ತು ಯುವ ಜನತೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಮರೆಯುತ್ತಿದ್ದಾರೆ, ಹಾಗಾಗಿ ಅವುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ದಿಂದ ಈ ಪಟ್ಟದ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಜೊತೆಗೆ ಪ್ರತಿದಿನ ಸಂಜೆ ಶ್ರೀ ವೆಂಕಟೇಶ್ವರ ಮಹಾತ್ಮೆ ಪ್ರವಚನ ನಡೆಸ ಲಾಗುತ್ತಿದೆ ಎಂದರು. 8 ಕೆಸಿಕೆಎಂ 5ಚಿಕ್ಕಮಗಳೂರಿನ ಕೋಟೆ ಬಡಾವಣೆಯ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವಥ್ಥ ನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಅವರ ಮನೆಯಲ್ಲಿ ಗೊಂಬೆಗಳ ಅನಾವರಣ.