ಸಾರಾಂಶ
ಕನಡಪ್ರಭ ವಾರ್ತೆ ಮಡಿಕೇರಿ
ಕೊಡವರ ಹೊಸ ವರ್ಷಾಚರಣೆ ಎಡ್ಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 14 ರಂದು ಗೋಣಿಕೊಪ್ಪದಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.ವಸಂತಋತು ಫೆ.15 ರಿಂದ ಆರಂಭಗೊಂಡು ಏ.14 ಕ್ಕೆ ಕೊನೆಗೊಳ್ಳುವ ಎಡ್ಮ್ಯಾರ್ ನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಸಂಜೆ 6.30ಕ್ಕೆ ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಾಲಯದ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಆರ್‌ಎಂಸಿ ಯಾರ್ಡ್‌ನಲ್ಲಿ ಕೊನೆಗೊಳ್ಳಲಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.ಸಂವಿಧಾನದ ಆರ್ಟಿಕಲ್ 244 ರಡಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯದ ಹಕ್ಕು ನೀಡಬೇಕು. ಸಂವಿಧಾನದ 340 ಮತ್ತು 342 ನೇ ವಿಧಿಯಡಿಯಲ್ಲಿ ಮೈಕ್ರೋಸ್ಕ್ಯೂಲ್ ಕೊಡವ ಜನಾಂಗದ ರಕ್ಷಣೆಯಾಗಬೇಕು. ಸಂವಿಧಾನದ 25, 26 ರ ವಿಧಿಯಡಿ ಕೊಡವರ ಗನ್ ನ್ನು ಸೇರ್ಪಡೆಗೊಳಿಸಿ ಕೋವಿ ಹೊಂದುವ ಹಕ್ಕನ್ನು ಆಬಾಧಿತಗೊಳಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕೆಂದು ಒತ್ತಾಯಿಸುವುದಾಗಿ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಅಂದು ಬೆಳಗ್ಗೆ 6ಗಂಟೆಗೆ ಮಡಿಕೇರಿ ತಾಲೂಕಿನ ಮದೆನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಕೂಪದಿರ ಒಕ್ಕದ ಮೋಹನ್ ಅವರ ಭೂಮಿಯಲ್ಲಿ ಉಳುಮೆ ಮಾಡುವ ಮೂಲಕ ಎಡ್ಮ್ಯಾರ್ ಆಚರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.ಎಡ್ಮ್ಯಾರ್ ಹಬ್ಬವು ವಸಂತಋತು ಫೆ.15 ರಿಂದ ಆರಂಭವಾಗಿ ಏ.14 ರಂದು ಮುಕ್ತಾಯವಾಗುವ ಹಂತವಾಗಿದೆ. ಸೂರ್ಯನು ಮೇಷ ನಕ್ಷತ್ರ ಪುಂಜಗಳತ್ತ ಸಾಗುವ ಪ್ರಕ್ರಿಯೆಯಾಗಿದೆ. ಎಲ್ಲಾ ಋತುಗಳಲ್ಲಿ ಈ ಋತು ಅತ್ಯಂತ ವರ್ಣರಂಜಿತವಾಗಿದೆ. ಕೃಷಿ ಚಟುವಟಿಕೆಯ ಮೂಲಕ ಪ್ರಕೃತಿಯೊಂದಿಗೆ ಬೆರೆತು ಹೋಗಿರುವ ಬುಡಕಟ್ಟು ಜನಾಂಗ ಕೊಡವರು ಕೊಡವ ಜನಾಂಗೀಯ ಪಂಚಾಂಗದ ಪ್ರಕಾರ ಸೌರಮಾನ ಹೊಸ ವರ್ಷವನ್ನು ಪ್ರಕೃತಿಯ ವಾರ್ಷಿಕ ಚಕ್ರದಲ್ಲಿ ಮೊದಲ ಹಬ್ಬವೆಂದು ಪರಿಗಣಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಆಚರಣೆಯ ಹಿನ್ನೆಲೆ:ಕೊಡವ ಬುಡಕಟ್ಟಿನ ಹೊಸ ವರ್ಷ ಎಂದರೆ ಸೌರಮಾನ ಕ್ಯಾಲೆಂಡರ್ ಮೂಲಭೂತವಾಗಿ ಎಡ್ಮ್ಯಾರ್ 1 ಗ್ರೆಗೋರಿಯನ್ ಕ್ಯಾಲೆಂಡರ್ ನೊಂದಿಗೆ ಹೊಂದಿಕೆಯಾಗುತ್ತದೆ. ಇದು ಕೊಡವ ಬುಡಕಟ್ಟು ಜನಾಂಗದವರ ಕೃಷಿ ಚಟುವಟಿಕೆಗಳ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ ಪ್ರಕೃತಿಯನ್ನು ಆರಾಧಿಸುವ ಕೊಡವರು ಎಡ್ಮ್ಯಾರ್ 1 ನ್ನು ಅತಿ ಉತ್ಸಾಹದಿಂದ ಆಚರಿಸಿ ಭೂದೇವಿಗೆ ನಮಿಸುತ್ತಾರೆ. ಈ ಜನಪದೀಯ ಬುಡಕಟ್ಟು ಆಚರಣೆ ಇಡೀ ವಿಶ್ವಕ್ಕೆ ಪರಿಚಯವಾಗಬೇಕು ಎನ್ನುವ ಉದ್ದೇಶದಿಂದ ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವಜನಿಕವಾಗಿ ಎಡ್ಮ್ಯಾರ್ ನ್ನು ಆಚರಿಸುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))