ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪವಿಶೇಷ ಚೇತನ ಮಕ್ಕಳು ದಿನಪೂರ್ತಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಸೂಸುವಲ್ಲಿ ಯಶಸ್ವಿಯಾದರು. ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿಶೇಷ ಚೇತನರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ನಾವು ಕೂಡ ಯಾರಿಗೂ ಕಡಿಮೆ ಇಲ್ಲ ಎಂಬಂತೆ ತಮ್ಮ ಪ್ರದರ್ಶನವನ್ನು ತೋರಿದರು.
ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷ ಚೇತನರಿಗೆ 15ಕ್ಕೂ ಹೆಚ್ಚಿನ ಕ್ರೀಡೆಗಳು ನಡೆದವು. ಮುಂಜಾನೆಯಿಂದ ಸಂಜೆ ವರೆಗೂ ನಡೆದ ವಿವಿಧ ಕ್ರೀಡೆಯಲ್ಲಿ ವಿಶೇಷ ಚೇತನರು ಆಸಕ್ತಿ ವಹಿಸಿ ಕ್ರೀಡೆಯಲ್ಲಿ ಪಾಲ್ಗೊಂಡರು.ಲಯನ್ಸ್ ಸಂಸ್ಥೆಯ ಗವರ್ನರ್ ಲ.ಮಲ್ವೀನ್ ಡಿಸೋಜ ಚಾಲನೆ ನೀಡಿ ಮಾತನಾಡಿ, ಕ್ರೀಡೋತ್ಸವಕ್ಕೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿರುವುದು ಶ್ಲಾಘನೀಯ. ಎಲ್ಲರೂ ಒಟ್ಟಾಗಿ ಸೇರಿ ವಿಶೇಷ ಚೇತನ ಮಕ್ಕಳೊಂದಿಗೆ ಬೆರೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಸಮಾಜದಲ್ಲಿ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟವು ನಡೆಸುತ್ತಿರುವುದರಿಂದ ಮಕ್ಕಳಲ್ಲಿನ ಪ್ರತಿಭೆಗಳಿಗೆ ಉತ್ತಮ ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದರು.ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮನ್ನಕ್ಕಮನೆ ಸೌಮ್ಯಬಾಲು ಅಧ್ಯಕ್ಷತೆ ವಹಿಸಿ, ವಿವಿಧ ಸಂಘ ಸಂಸ್ಥೆಗಳು ವಿಶೇಷ ಚೇತನರ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು. ಇಂತಹ ಮಕ್ಕಳಿಗೆ ವೇದಿಕೆಗಳು ಆಗಿಂದ್ದಾಗಿಯೆ ಸಿಗುವಂತಾಗಬೇಕು. ಇದರಿಂದ ಇವರಲ್ಲಿನ ಪ್ರತಿಭೆಗಳನ್ನು ಹೊರಸೂಸಲು ಅವಕಾಶ ನೀಡಿದಂತಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ವಿಶೇಷ ಚೇತನರ ಕಲ್ಯಾಣಾಧಿಕಾರಿ ವಿಮಲಾ ಮಾತನಾಡಿ, ಪ್ರತಿ ವರ್ಷವೂ ವಿಶೇಷ ಚೇತನರಿಗೆ ಕ್ರೀಡೋತ್ಸವ ಆಯೋಜಿಸಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶ ಲಭ್ಯವಿರದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರತಿ ಮಗುವಿಗೂ ಪಾಲ್ಗೊಳ್ಳುವ ನಿಟ್ಟಿನಲ್ಲಿ ಈ ಕ್ರೀಡೆಯನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ. ಇಲ್ಲಿ ವಿಜೇತರಾದವರನ್ನು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಮಾಡಕೊಡಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಪರಿವೀಕ್ಷಣಾಧಿಕಾರಿ ಗಾಯಿತ್ರಿ, ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್‌ನ ಅಧ್ಯಕ್ಷರಾದ ಗೀತಾ ಚೆಂಗಪ್ಪ, ಉಪಾಧ್ಯಕ್ಷರಾದ ಸುನೀತ ರಾಮಸ್ವಾಮಿ, ಗೌರವ ಕಾರ್ಯದರ್ಶಿ ಆಶಾ ಸುಬ್ಬಯ್ಯ, ಸ್ವಾಮಿ ವಿವೇಕನಂದಾ ಸಂಸ್ಥೆಯ ಖಜಾಂಜಿ ಡಾ.ಚಂದ್ರಶೇಖರ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್ ಸೇರಿದಂತೆ ಇನ್ನಿತರ ಪ್ರಮುಖರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.ವೇದಿಕೆಯಲ್ಲಿ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ರಜನಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮಹೇಶ್, ಗೋಣಿಕೊಪ್ಪ ಗ್ರಾ.ಪಂ. ಪಿಡಿಒ ತಿಮ್ಮಯ್ಯ, ಕಾರ್ಯದರ್ಶಿ ರಾಜು, ಗೋಣಿಕೊಪ್ಪ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಲೋಕೆಶ್ ಕಾರ್ಯಪ್ಪ, ಕಾರ್ಯದರ್ಶಿ ಅಪ್ಪಣ್ಣ, ಖಜಾಂಜಿ ಕುಶಾಲಪ್ಪ ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಆರ್‌ಡಬ್ಲ್ಯು ಶಾಂತಿ, ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್‌ನ ವಿಶೇಷ ಶಿಕ್ಷಕಿ ಶಂಸಿದ ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ಶಿವರಾಜ್ ನಿರೂಪಿಸಿದರು. ಶಿಶು ಕಲ್ಯಾಣ ಇಲಾಖೆಯ ಎಸಿಡಿಪಿಒ ರೀತಾ ವಂದಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು, ಪೋಷಕರು ಪಾಲ್ಗೊಂಡಿದ್ದರು.