ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಯನ್ನು ಬರುವ ಜನವರಿಯಿಂದ ಜಾರಿಗೆ ತರಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ನಗರದ ಸೈನ್ಸ್ ಮೈದಾನದಲ್ಲಿ ಬುಧವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಹಲವಾರು ವಿದ್ಯಾರ್ಥಿಗಳು ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಬೇರೆ, ಬೇರೆ ಕಡೆ ಅಲೆದಾಡುತ್ತಾರೆ. ಹಾಗಾಗಿ ಅವರಿಗೆ ಅನುಕೂಲವಾಗಲು ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಈ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ನಿರುದ್ಯೋಗಿಗಳು ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗದಿರಲೆಂದು ಹಾಗೂ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ಅನುಕೂಲವಾಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಯುವನಿಧಿ ಯೋಜನೆ ರೂಪಿಸಿದೆ. ಡಿಪ್ಲೊಮಾ ಮುಗಿಸಿದವರಿಗೆ ಪ್ರತಿ ತಿಂಗಳು ₹1500, ಪದವಿ ಮುಗಿಸಿದವರಿಗೆ ₹3000 ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.ಯುವಜನತೆಗೆ ಅವಕಾಶಗಳನ್ನು ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದು, 82 ಕಂಪೆನಿಗಳು ವಿವಿಧ ರೀತಿಯ ಹುದ್ದೆಗಳನ್ನು ನೀಡಲು ಮುಂದೆ ಬಂದಿವೆ. 12 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡು ಉಪಯೋಗ ಪಡೆಯಬೇಕು. ನಮ್ಮ ಭಾಗದ ಮಕ್ಕಳು ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರಿಗೆ ಉತ್ತಮ ಅವಕಾಶಗಳು ಇಂದು ಸಿಗಬೇಕು ಎಂದರು.
ವಿಧಾನ ಪರಿಷತ್ತು ಶಾಸಕರಾದ ಡಿ.ಎಸ್. ಅರುಣ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಯಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅನೇಕ ಅವಕಾಶಗಳು ತೆರೆಯಲ್ಪಟ್ಟಿವೆ. ರಾಜ್ಯ ಸರ್ಕಾರದಿಂದ ಯಶಸ್ವಿ ಉದ್ಯೋಗ ಮೇಳಗಳು ಜರುಗುತ್ತಿವೆ. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಾರೆ. ಶಿವಮೊಗ್ಗದಲ್ಲಿಯೇ ಅವರಿಗೆ ಉದ್ಯೋಗ ನೀಡುವಂತಹ, ಸೇವಾ ನಿಲುವುಳ್ಳ ಕಂಪನೆಗಳು ಬರಬೇಕು ಎಂದು ಆಶಿಸಿದರು.ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶಕ ನಾಗೇಂದ್ರ ಎಫ್. ಹೊನ್ನಳ್ಳಿ, ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು.
ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ ಸ್ವಾಗತಿಸಿದರು. ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್ ಇತರೇ ಅಧಿಕಾರಿಗಳು ಹಾಜರಿದ್ದರು.- - - ಬಾಕ್ಸ್...
ಸ್ಥಳದಲ್ಲೇ ಅಭ್ಯರ್ಥಿಗಳಿಗೆ ಆದೇಶ ಪತ್ರಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಬುಧವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಒಟ್ಟು 5738 ಅಭ್ಯರ್ಥಿಗಳು ನೋಂದಣಿಯಾಗಿದ್ದು, 3756 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 78 ಅಭ್ಯರ್ಥಿಗಳಿಗೆ ಸ್ಥಳದಲ್ಲೆ ಉದ್ಯೋಗದ ಆದೇಶ ಪತ್ರ ನೀಡಲಾಗಿದ್ದು, ಸಚಿವ ಮಧು ಬಂಗಾರಪ್ಪ 20 ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರವನ್ನು ವಿತರಿಸಿದರು. ಇನ್ನೂ 767 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಆಗಿದ್ದು, ಸುಮಾರು 1000 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ.
- - - -8ಎಸ್‌ಎಂಜಿಕೆಪಿ02: ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.