ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ 4ನೇ ಬಾರಿಗೆ ಸ್ಪರ್ಧಿಸಿದ್ದು, ಕ್ಷೇತ್ರದ ಶಿಕ್ಷಕ ಮತದಾರರ ಸಂಕಲ್ಪ ಹಾಗೂ ಶುಭ ಹಾರೈಕೆಯೊಂದಿಗೆ ಮತ್ತೊಮ್ಮೆ ವಿಧಾನಪರಿಷತ್ ಪ್ರವೇಶಿಸುವ ಸೌಭಾಗ್ಯ ದೊರೆಯಲಿದೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಹೇಳಿದರು.ನಗರದ ಬಾಪೂಜಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಶಿಕ್ಷಕರ ಸ್ನೇಹಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತಯಾಚಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳು ಹಲವು ಆಯಾಮಗಳನ್ನು ಹೊಂದಿವೆ. ಈಗಾಗಲೇ 3 ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದೇನೆ ಎಂದರು.
ಚುನಾವಣೆ ಸಂದರ್ಭದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಬಾರದು ಎಂಬ ಶಿಕ್ಷಕರ ಕೋರಿಕೆಯ ಬಗ್ಗೆ ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿದ್ದೇನೆ. ಅಲ್ಲದೆ ವಿಶೇಷವಾಗಿ ಶಿಕ್ಷಕರ ಮೂಲಭೂತ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸರ್ಕಾರವನ್ನು ಪ್ರತಿಹಂತದಲ್ಲೂ ತರಾಟೆಗೆ ತೆಗೆದುಕೊಂಡಿದ್ದು, ವೇತನ ಸೇರಿ ಶಿಕ್ಷಕರಿಗೆ ಎಲ್ಲಾ ಸೌಲಭ್ಯ ದೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೆ. ಓಪಿಎಸ್ ಜಾರಿ ಮಾಡುವಂತೆ ಬೆಂಗಳೂರಿನಲ್ಲಿ ಶಿಕ್ಷಕರು ನಡೆಸಿದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾರಕ್ಕೆ ತಾಕೀತು ಮಾಡಲಾಗಿದೆ ಎಂದರು.ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯವಾಗಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣದಿಂದ ಕಾಲೇಜು, ಸ್ನಾತಕೋತ್ತರ ಶಿಕ್ಷಣದವರೆಗೂ ಸರ್ಕಾರ ಕೈಗೊಂಡಿರುವ ಹಲವಾರು ನಿಯಮಗಳು ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಮಾರಕವಾಗಿವೆ. ಸರ್ಕಾರ ಶಿಕ್ಷಣಕ್ಕೆ ಸಂಬಂಧಪಟ್ಟ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ವಿಧಾನ ಪರಿಷತ್‌ನಲ್ಲಿ ಸರ್ಕಾರದ ವಿರುದ್ಧ ಎಷ್ಟೇ ಗಟ್ಟಿಯಾಗಿ ಕೂಗಿದರೂ ಸರ್ಕಾರ ಮಾತ್ರ ನಿರುತ್ತರ ನೀಡುತ್ತದೆ. ಆದ್ದರಿಂದ ಈ ಬಾರಿ ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದ ಬಯಸಿದ್ದೇನೆ, ಮತ್ತೊಮ್ಮೆ ವಿಧಾನಪರಿಷತ್‌ಗೆ ಆಯ್ಕೆಯಾಗಿ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆಂದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಜಿ.ಬಾಲರೆಡ್ಡಿ ಮಾತನಾಡಿ, ಶಿಕ್ಷಕರ ಸ್ನೇಹಕೂಟ ಪಕ್ಷಾತೀತವಾಗಿ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸುವ ವ್ಯಕ್ತಿ ನಮಗೆ ಬೇಕಿದೆ. ನಮ್ಮ ನೂರಾರು ಸಮಸ್ಯೆಗಳನ್ನು ಅರಿತು ನಿವಾರಣೆ ಮಾಡುವ ಶಕ್ತಿ ಇರುವ ವ್ಯಕ್ತಿಯನ್ನು ನಾವೆಲ್ಲರೂ ಬೆಂಬಲಿಸಬೇಕಿದೆ ಎಂದರು. ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಈ ಕ್ಷೇತ್ರದ ಶಿಕ್ಷಕರ ಸಮಸ್ಯೆಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತಾರೆಂಬ ಭಾವನೆ ನಮ್ಮ ಶಿಕ್ಷಕರಲ್ಲಿದೆ. ನಿಮ್ಮೆಲ್ಲರ ಬೆಂಬಲ ಅವರಿಗೆ ಶ್ರೀರಕ್ಷೆ ಎಂದರು.ಈ ವೇಳೆ ನಿವೃತ್ತ ಪ್ರಾಂಶುಪಾಲ ಜಿ.ಕೆ.ವೆಂಕಂಟ ರೆಡ್ಡಿ, ನಜೀರ್‌ಆಹಮದ್, ಯೆಂಜಾರಪ್ಪ, ಶ್ರೀನಿವಾಸ್‌ಮೂರ್ತಿ, ಟಿ.ತಿಪ್ಪಮ್ಮ, ರಾಮರೆಡ್ಡಿ, ಸುಭಾನ್, ನಾಗರಾಜು, ಓಬಣ್ಣ, ಶಾಂತವೀರಪ್ಪ, ನಜೀರುಲ್ಲಾ, ತಿಪ್ಪೇಸ್ವಾಮಿ, ಅಂಜಿನಪ್ಪ, ಆಹಮ್ಮದ್, ಕೆ.ಚಿತ್ತಯ್ಯ ಮುಂತಾದವರು ಉಪಸ್ಥಿತರಿದ್ದರು.