ಸಾರಾಂಶ
ಗುತ್ತಲ: ಮನುಷ್ಯನಿಗೆ ಒಳ್ಳೆಯ ಗುಣ, ನಡತೆ ಮತ್ತು ಸಂಸ್ಕಾರಗಳೇ ನಿಜವಾದ ಆಸ್ತಿಯೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಗುತ್ತಲದ ಐತಿಹಾಸಿಕ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ನೂತನ ಶಿಲಾಮಠದ ಉದ್ಘಾಟನಾಪೂರ್ವ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಎಲ್ಲಿಯ ತನಕ ನಂಬಿಕೆ, ಸ್ನೇಹ, ಪ್ರೀತಿ ಎಂಬ ಬೇರುಗಳು ಗಟ್ಟಿಯಾಗಿರುತ್ತವೆಯೋ ಅಲ್ಲಿಯ ತನಕ ಸಂಬಂಧವೆಂಬ ಮರ ಅಲುಗಾಡದೇ ಗಟ್ಟಿಯಾಗಿರುತ್ತದೆ. ತಂದೆಯಿಂದ ಪಡೆದ ಗತ್ತು ತಾಯಿಯಿಂದ ಪಡೆದ ತುತ್ತು ಶಿಕ್ಷಕರಿಂದ ಕಲಿತ ಶಿಸ್ತು ಎಂದಿಗೂ ಮರೆಯಲಾಗದು. ಸಂಬಂಧಗಳು ಪುಸ್ತಕ ಇದ್ದಂತೆ. ಬರೆಯಲು ವರುಷಗಳೇ ಬೇಕು. ಆದರೆ ನಾಶ ಮಾಡಲು ಒಂದು ಕ್ಷಣ ಸಾಕು ಎಂದರು.
ಬಡವನಿಗೆ ನೆಮ್ಮದಿ ಇರುತ್ತದೆ. ಆದರೆ ಹಣ ಇರುವುದಿಲ್ಲ. ಶ್ರೀಮಂತನಿಗೆ ಹಣ ಇರುತ್ತದೆ. ಆದರೆ ನೆಮ್ಮದಿ ಇರುವುದಿಲ್ಲ. ಹಣ ನೆಮ್ಮದಿ ಇದ್ದವರಿಗೆ ಒಳ್ಳೆಯ ಗುಣ ಇರುವುದಿಲ್ಲ. ಹಣ ಗುಣ ನೆಮ್ಮದಿ ಇದ್ದವರು ಭೂಮಿ ಮ್ಯಾಲೆ ಬಹಳ ವರುಷ ಇರುವುದಿಲ್ಲ ಎಂಬ ಸತ್ಯ ಅರಿಯಬೇಕಾಗಿದೆ ಎಂದರು.ನೇತೃತ್ವ ವಹಿಸಿದ್ದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಜೀವನದ ಉಜ್ವಲ ಭವಿಷ್ಯಕ್ಕೆ ಗುರು ಮಾರ್ಗದರ್ಶನ ಅವಶ್ಯಕವಾಗಿದೆ. ಕಾಲ ಕಾಲಕ್ಕೆ ಮಹಾತ್ಮರು ಕೊಟ್ಟ ಅಮೂಲ್ಯ ಸಂದೇಶದ ನುಡಿಗಳು ಎಲ್ಲರಿಗೂ ದಾರಿದೀಪ. ಗುತ್ತಲದ ನೂತನ ಹೇಮಗಿರಿ ಶಿಲಾಮಠ ಉದ್ಘಾಟನೆಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ, ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ಬದುಕಿ ಬಾಳುವ ಜನಾಂಗಕ್ಕೆ ಧರ್ಮದ ಅರಿವು ಮತ್ತು ಆಚರಣೆ ಬೇಕು. ಅರಿವಿನ ಆಚಾರ ಬದುಕಿನ ಉನ್ನತಿಗೆ ಅಡಿಪಾಯ. ರೇಣುಕಾಚಾರ್ಯರ ಮೌಲ್ಯಾಧಾರಿತ ವಿಚಾರಧಾರೆ ಸಕಲರ ಬಾಳಿನಲ್ಲಿ ಬೆಳಕು ತೋರುತ್ತವೆ ಎಂದರು.ಅಂಗೂರ ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು, ಗುತ್ತಲ- ಅಗಡಿ ಕಲ್ಮಠದ ಗುರುಸಿದ್ಧ ಸ್ವಾಮಿಗಳು ನುಡಿನಮನ ಸಲ್ಲಿಸಿದರು.
ಸಮಾರಂಭಕ್ಕೂ ಮುನ್ನ ವಿವಿಧ ವಾದ್ಯಗಳ ಮೂಲಕ ಬಾಳೆಹೊನ್ನೂರು ರಂಭಾಪುರಿ ಶ್ರೀಗಳನ್ನು ಸಾರೋಟು ಮೆರವಣಿಗೆ ಮೂಲಕ ಬರಮಾಡಿಕೊಂಡರು. ಪೂರ್ಣಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು ಹಲವಾರು ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದರು.ಈ ಸಂದರ್ಭದಲ್ಲಿ ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ರುದ್ರಪ್ಪ ಹಾದಿಮನಿ, ಕೊಟ್ರೇಶ ಅಂಗಡಿ, ಸಂಗಯ್ಯಸ್ವಾಮಿ ಹೇಮಗಿರಿಮಠ, ಬಸವರಾಜ ಹೇಮಗಿರಿಮಠ, ಅಜ್ಜಪ್ಪ ತರ್ಲಿ, ಚನ್ನಪ್ಪ ಕಲಾಲ, ಶಂಕ್ರಪ್ಪ ಚಂದಾಪುರ, ಪಾಲಾಕ್ಷಯ್ಯ ನೆಗಳೂರಮಠ, ಪಪಂ ಸದಸ್ಯರು, ಸೇರಿದಂತೆ ಅನೇಕರಿದ್ದರು.ಶಂಭುಲಿಂಗಯ್ಯ ಚ. ಹೇಮಗಿರಿಮಠ ಸ್ವಾಗತಿಸಿದರು. ಸಿ.ಬಿ. ಕುರವತ್ತಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))