ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಖಾಸಗಿ ಶಾಲೆಗಳಲ್ಲಿನ ಶಿಕ್ಷಣ ಓದಿಗೆ ಸೀಮಿತ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವು ಸಂಸ್ಕಾರವನ್ನು ಕಲಿಸುತ್ತದೆ, ಅದು ಬದುಕಿಗೆ ದಾರಿದೀಪವಾಗಲಿದೆ. ಕೀಳರಿಮೆ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಎಂದು ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಭೈರೇಗೌಡ ಕರೆ ನೀಡಿದರು.ತಾಲೂಕಿನ ಚೌಡದೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ‘ಅಕ್ಷರಶಾಹಿ ಶಿಕ್ಷಣಂ’ ಯೋಜನೆಯಡಿ ಸಿಎಸ್‌ಆರ್ ನಿಧಿಯಿಂದ ಕೊಡುಗೆಯಾಗಿ ನೀಡಲಾದ ಡೆಸ್ಕ್‌ಗಳು, ಅಲ್ಮೇರಾಗಳು, ಟೇಬಲ್,ಚೇರ್, ಕಂಪ್ಯೂಟರ್, ಬ್ಯಾಂಡ್‌ಸೆಟ್ ಮತ್ತಿತರ ೩ ಲಕ್ಷ ರು. ಮೌಲ್ಯದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು. ಆದರ್ಶ ವ್ಯಕ್ತಿಗಳಾಗಿ ಗುರುತಿಸಿಕೊಂಡಿರುವ ಎಲ್ಲಾ ಮಹನೀಯರೂ ಸರ್ಕಾರಿ ಶಾಲೆಗಳಲ್ಲಿ ಓದಿದವರೇ, ಇಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಶಿಕ್ಷಕರಿದ್ದಾರೆ, ಒಳ್ಳೆಯ ವಾತಾವರಣವಿದೆ, ಸಮಾಜದ ಪರಿಚಯ ನಿಮಗಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಪಠ್ಯ ಕಲಿಕೆ ಮಾತ್ರವಲ್ಲ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಂಸ್ಕಾರ, ಬದುಕು ಕಲಿಸುವ ಸಮಗ್ರ ಶಿಕ್ಷಣದ ಅಗತ್ಯವಿದೆ. ಇಂದು ಅತ್ಯುನ್ನತ ವ್ಯಾಸಂಗ ಮಾಡಿದ ಅನೇಕರು ಭಯೋತ್ಪಾದಕ ಚಟುವಟಿಕೆಗಳಡಿ ಬಂಧನಕ್ಕೆ ಒಳಗಾಗಿರುವುದನ್ನು ಕಂಡಿದ್ದೇವೆ, ಆದ್ದರಿಂದ ಶಿಕ್ಷಣದಲ್ಲಿ ಮೌಲ್ಯಗಳಿರಬೇಕು, ಸಂಸ್ಕಾರ,ಸಮುದಾಯದೊಂದಿಗೆ ಸಂಬಂಧದ ಮಹತ್ವ ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.ಶಾಹಿ ಗಾರ್ಮೆಂಟ್ಸ್ ಸಂಸ್ಥೆ ದೇಶದ ವಿವಿಧೆಡೆ ತನ್ನ ಕಂಪನಿಗಳನ್ನು ನಡೆಸುತ್ತಿದ್ದು, ೧.೬೫ ಲಕ್ಷ ಮಂದಿಗೆ ಉದ್ಯೋಗ ನೀಡಿದೆ, ನಾವು ಉದ್ಯೋಗ ಮಾತ್ರವಲ್ಲ ಅದರ ಜತೆಯಲ್ಲೇ ಸಮುದಾಯದ ಅಭಿವೃದ್ಧಿಗೂ ನಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಾ ಬಂದಿದ್ದೇವೆ ಎಂದರು.
ಶಾಹಿ ಎಕ್ಸ್‌ಪೋರ್ಟ್ಸ್ ಕಂಪನಿ ಈ ಭಾಗದ ಹಲವಾರು ಶಾಲೆಗಳಿಗೆ ನೆರವು ನೀಡುತ್ತಾ ಬಂದಿದೆ, ನಮ್ಮ ಉದ್ದೇಶ ಗ್ರಾಮೀಣ ಮಕ್ಕಳಿಗೆ ಉತ್ತಮ ಸೌಲಭ್ಯ ಸಿಗಬೇಕೆಂಬುದೇ ಆಗಿದ್ದು, ಶಾಲೆಗೆ ನೀಡಿರುವ ಪರಿಕರಗಳ ಪ್ರಯೋಜನ ಪಡೆದುಕೊಳ್ಳಿ ಎಂದ ಅವರು, ಶಾಲಾ ಆವರಣಕ್ಕೆ ಶೀಟ್, ಹೊದಿಕೆ, ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೂ ಕ್ರಮವಹಿಸಿರುವುದಾಗಿ ತಿಳಿಸಿದರು.ಅರಾಭಿಕೊತ್ತನೂರು ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಖಾಸಗಿ ಶಾಲೆಗಳಲ್ಲಿನ ಶಿಕ್ಷಣವು ಮಕ್ಕಳನ್ನು ವಿದೇಶಗಳತ್ತ ಮುಖ ಮಾಡುವಂತೆ ಮಾಡಿದೆ, ಇದುವೇ ವೃದ್ಧಾಶ್ರಮಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಷಾಧಿಸಿದರು.
ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಶಾಲೆಗಳ ಕುರಿತು ತಾತ್ಸಾರ ಮಾಡದಿರಿ, ಖಾಸಗಿ ಶಾಲೆಗಳಿಗಿಂತ ಇಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ, ಈ ಶಾಲೆಗಳ ಅಸ್ಥಿತ್ವಕ್ಕೆ ಧಕ್ಕೆ ಬಂದರೆ ಅದು ಸಮಾನ ಶಿಕ್ಷಣಕ್ಕೆ ಹೊಡೆತ ಬಿದ್ದಂತೆ ಎಂದು ಎಚ್ಚರಿಸಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಸೌಲಭ್ಯ ಒದಗಿಸಿರುವ ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೌಮ್ಯಲತಾ ಮಾತನಾಡಿದರು.
ಗ್ರಾಮದ ಮುಖಂಡ ಶಿವರಾಜ್ ,ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಸೀನಿಯರ್ ಎಕ್ಸಿಕ್ಯೂಟೀವ್‌ಗಳಾದ ಧನಂಜಯ್‌ಕುಮಾರ್, ಎಂ.ಜೆ.ಸ್ಫೂರ್ತಿ, ಗ್ರಾಪಂ ಉಪಾಧ್ಯಕ್ಷ ನಾಗೇಶ್, ಸದಸ್ಯ ನಾಗರಾಜ್, ಮುಖ್ಯ ಶಿಕ್ಷಕಿ ಟಿ.ಆರ್.ಭಾಗ್ಯಮ್ಮ, ಎಸ್‌ಡಿಎಂಸಿ ಅಧ್ಯಕ್ಷೆ ಶೈಲಜ, ಮಾಜಿ ಅಧ್ಯಕ್ಷ ಗಂಗಣ್ಣ, ಸದಸ್ಯರಾದ ಲಕ್ಷ್ಮಯ್ಯ, ಶಿವು, ಆಂಜಿನಪ್ಪ, ಮಣಿಕಂಠ, ಉಜಿನಪ್ಪ, ಶಾರದಮ್ಮ, ಕೋಮಲಮ್ಮ, ಸವಿತಾ, ಪವಿತ್ರಾ, ಗ್ರಾಪಂ ಲೆಕ್ಕಾಧಿಕಾರಿ ಮಧು, ಶಿಕ್ಷಕ ವೆಂಕಟರೆಡ್ಡಿ, ಶಿಕ್ಷಕಿ ಕೆ.ಟಿ.ಪುಷ್ಪಾ ಮತ್ತಿತರರಿದ್ದು,ಕಾರ್ಯಕ್ರಮದಲ್ಲಿ ಶಿಕ್ಷಕ ಸೋಮಶೇಖರ್ ಸ್ವಾಗತಿಸಿ, ನಿರೂಪಿಸಿದರು, ಕೀರ್ತಿ, ಸೌಜನ್ಯ, ದಿವ್ಯಾ ಪ್ರಾರ್ಥಿಸಿದರು.