ಸತ್ಕಾರ್ಯದಿಂದ ಜೀವನ ಸಾರ್ಥಕ: ಕಡಕೋಳ ಶ್ರೀಗಳು

| Published : Aug 14 2024, 01:01 AM IST

ಸತ್ಕಾರ್ಯದಿಂದ ಜೀವನ ಸಾರ್ಥಕ: ಕಡಕೋಳ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

Good deeds make life worthwhile: Mr. Kadakola

-ಸಗರ ಗ್ರಾಮದ ದೇಸಾಯಿ ಮಠದಲ್ಲಿ ಧರ್ಮಸಭೆ । ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತುಲಾಭಾರ ಕಾರ್ಯಕ್ರಮ

------

ಕನ್ನಡಪ್ರಭ ವಾರ್ತೆ ಶಹಾಪುರ

ಅಧಿಕಾರ, ಹಣ ಶಾಶ್ವತವಲ್ಲ. ಜೀವಿತಾವಧಿಯಲ್ಲಿ ಜನಪರ ಕೆಲಸ ಮಾಡುವುದು ಜನರ ಮನಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಕಡಕೋಳ ಮಡಿವಾಳೇಶ್ವರ ಮಠದ ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಸಗರ ಗ್ರಾಮದ ಮಹಾತ್ಮ ಸಿದ್ಧರಾಮೇಶ್ವರ ಸ್ವಾಮಿ ದೇಸಾಯಿ ಮಠದಲ್ಲಿ ಜರುಗಿದ 25ನೇ ವರ್ಷದ ಮಹಾತ್ಮ ಸಿದ್ಧರಾಮೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ತುಲಾಭಾರ ಹಾಗೂ ಧರ್ಮಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಚಿಗರಳ್ಳಿಯ ಸಿದ್ಧ ಬಸವ ಕಬೀರಾನಂದ ಮಹಾಸ್ವಾಮಿಗಳು ಮಾತನಾಡಿ, ನಾವು ಮಾಡುವ ಸೇವೆ ಸಕಾರಾತ್ಮಕವಾಗಿದ್ದರೆ ಬದುಕಿನಲ್ಲಿ ನೆಮ್ಮದಿ ಲಭಿಸುತ್ತದೆ. ಹಗಲಿರುಳು ದುಡಿಯುವ ಪ್ರತಿಯೊಂದು ದೇಹ ಮತ್ತು ಮನಸ್ಸಿಗೆ ಮಾನಸಿಕ ನೆಮ್ಮದಿ ಮತ್ತು ಶಾಂತಿ ಸಿಗಬೇಕಾದರೆ ಇಂಥ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಆಗಾಗ ಭಾಗಿಯಾಗಬೇಕು ಎಂದರು.

ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರು ಸತ್ಕಾರ್ಯ, ಉಪಾಸನೆಗಳು, ದೇವರ ಪೂಜೆ, ಪುನಸ್ಕಾರ, ನಿರಂತರವಾಗಿ ಮಾಡುತ್ತಾ ಇದ್ದರೆ, ಬದುಕಿನಲ್ಲಿ ಯಶಸ್ಸು ದೊರಕುವುದರ ಜತೆಗೆ ಧರ್ಮ, ಸಂಸ್ಕಾರ, ಸಂಸ್ಕೃತಿ ನಮ್ಮೊಳಗೆ ಬೆಳೆಯಲು ಸಾಧ್ಯ ಎಂದು ಶಹಾಪುರದ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಪದೇಶ ನೀಡಿದರು.

ನಂತರ 25ನೇ ವರ್ಷದ ಮಹಾತ್ಮ ಸಿದ್ಧರಾಮೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಭಿಷೇಕ ಕಾರ್ಯಕ್ರಮದ ಅಂಗವಾಗಿ ಕಡಕೋಳ ಮಡಿವಾಳೇಶ್ವರ ಮಠದ ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಅವರಿಗೆ ತುಲಾಭಾರ ಕಾರ್ಯಕ್ರಮ ನೆರವೇರಿತು.

ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಲಕರ್ಟಿಯ ಶ್ರೀಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನಾಗಠಾಣ ಹಿರೇಮಠದ ಪೂಜ್ಯ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ, ನಿಲೋಗಲ್ ಗುರಲಿಂಗಯ್ಯ ತಾತ ಗದ್ದುಗೆಯ ಬಸಯ್ಯ ಸ್ವಾಮಿಗಳು, ಚನ್ನೂರು ರೇವಣಸಿದ್ದೇಶ್ವರ ಮಠದ ಗುರುಪಾದಯ್ಯ ಸ್ವಾಮಿಗಳು, ಸಮಾಜದ ಹಿರಿಯ ಮುಖಂಡರಾದ ರಾಜಶೇಖರ್ ದೇಸಾಯಿ, ಬಂಟನೂರ ಆಮಯ್ಯಸ್ವಾಮಿ ಶಾಸ್ತ್ರಿಗಳು ಸೇರಿದಂತೆ ಇತರರಿದ್ದರು.

ಮಠದ ಧರ್ಮಾಧಿಕಾರಿಗಳಾದ ವಿಶ್ವರಾಧ್ಯಸ್ವಾಮಿ ದೇಸಾಯಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶರಣಪ್ಪ ನಾಗಲೋಟ ಹರಗುರು ಚರಮೂರ್ತಿಗಳು ಸ್ವಾಗತಿಸಿದರು. ಬಸವರಾಜ ಶಿನ್ನೂರ ನಿರೂಪಿಸಿ, ವಂದಿಸಿದರು. ಮನೋಹರ್ ಪ್ರತಿ ಹಸ್ತ, ಮನೋಹರ್ ವಿಶ್ವಕರ್ಮ ಹಾಗೂ ರಮೇಶ್ ವಿಶ್ವಕರ್ಮ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.

-----

13ವೈಡಿಆರ್9: ಶಹಾಪುರ ತಾಲೂಕಿನ ಸಗರ ಗ್ರಾಮದ ದೇಸಾಯಿ ಮಠದಲ್ಲಿ ನಡೆದ ಧರ್ಮಸಭೆಯನ್ನು ಹರಗುರು ಚರ ಮೂರ್ತಿಗಳು ಉದ್ಘಾಟನೆ ಮಾಡಿದರು.

--

13ವೈಡಿಆರ್10: ಶಹಾಪುರ ತಾಲೂಕಿನ ಸಗರ ಗ್ರಾಮದ ದೇಸಾಯಿ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಕಡಕೋಳ ಮಡಿವಾಳೇಶ್ವರ ಮಠದ ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಅವರಿಗೆ ತುಲಾಭಾರ ಕಾರ್ಯಕ್ರಮ ನೆರವೇರಿತು.

---000---