ಸಾರಾಂಶ
ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ
ಹಾವೇರಿ: ಆರೋಗ್ಯಕರ ಜೀವನಕ್ಕೆ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್.ಮುತಾಲಿಕದೇಸಾಯಿ ಹೇಳಿದರು.
ತಾಲೂಕಿನ ದೇವಗಿರಿ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪಾ ಸಿದ್ದಮ್ಮನವರ ಅವರು ಅಪೌಷ್ಟಿಕತೆ ನಿರ್ವಹಣೆಗೆ ಸೂಕ್ತ ಕ್ರಮಗಳ ಬಗ್ಗೆ, ಮಕ್ಕಳಲ್ಲಿ ಬೊಜ್ಜು ನಿವಾರಣೆಗೆ ಹಾಗೂ ಆರೋಗ್ಯಕರ ಜೀವನ ಶೈಲಿ ಚಟುವಟಿಕೆಗಳ ಕುರಿತು ಮಾತನಾಡಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಐ.ಎ. ತಹಸೀಲ್ದಾರ ಮಾತನಾಡಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿ ಅಪೌಷ್ಠಿಕತೆ ಹೊಗಲಾಡಿಸುವುದು ರಾಷ್ಟ್ರೀಯ ಪೋಷಣ ಪಕ್ವಾಡ್ ಮುಖ್ಯ ಉದ್ದೇಶವಾಗಿದೆ. 2018 ಮಾ. 8 ರಂದು ಪೋಷಣ ಅಭಿಯಾನ ಆರಂಭಿಸಲಾಗಿದೆ. ಪ್ರತಿ ವರ್ಷ ಏ. 8 ರಿಂದ 22ರವರೆಗೆ ಪ್ರತಿ ದಿನ ಕಾರ್ಯಕ್ರಮ ಆಯೋಜನೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ದೇವಗಿರಿ ಗ್ರಾಪಂ ಅಧ್ಯಕ್ಷರು, ಸಂರಕ್ಷಣಾಧಿಕಾರಿ ಶೋಭಾ ವನ್ನಳ್ಳಿ, ಹಿರಿಯ ಮೇಲ್ವಿಚಾರಕಿ ರೇಖಾ ನಾಡಿಗೇರ, ರೇಣುಕಾ ತಳವಾರ, ಹೊನ್ನಮ್ಮ ರೋಡಗೋಳಪ್ಪನವರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇತರರು ಉಪಸ್ಥಿತರಿದ್ದರು.