ಸ್ಕೌಟ್ಸ್, ಗೈಡ್ಸ್ ಮೂಲಕ ಸುಶಿಕ್ಷಣ ಸಾಧ್ಯ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ

| Published : Jan 02 2024, 02:15 AM IST

ಸ್ಕೌಟ್ಸ್, ಗೈಡ್ಸ್ ಮೂಲಕ ಸುಶಿಕ್ಷಣ ಸಾಧ್ಯ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಒಂದು ವಾರದ ಮೂಲ ತರಬೇತಿ ಶಿಬಿರವನ್ನು ಶಾಹಾಪುರದಲ್ಲಿ ಸಚಿವರು ಉದ್ಘಾಟಿಸಿದರು. ಮಕ್ಕಳಲ್ಲಿ ಶಾಂತಿ ಹಾಗೂ ಸಹೋದರತೆ, ಸೌಹಾರ್ದ ಭಾವನೆ ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಕನ್ನಡಪ್ರಭ ವಾರ್ತೆ ಶಹಾಪುರ

ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುವ ಮೂಲಕ ಮಕ್ಕಳಲ್ಲಿ ಶಾಂತಿ ಹಾಗೂ ಸಹೋದರತೆ, ಸೌಹಾರ್ದ ಭಾವನೆ ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಮಿತಿ ಯಾದಗಿರಿ ಹಾಗೂ ತಾಲೂಕು ಸಮಿತಿ ಶಹಾಪುರ ವತಿಯಿಂದ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಒಂದು ವಾರದ ಮೂಲ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪಿ.ಜಿ.ಆರ್. ಸಿಂಧ್ಯಾರಂತಹ ಮುಸ್ತದಿ ನಾಯಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜವಾಬ್ಧಾರಿ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿಭಾಯಿಸುವ ಮೂಲಕ ರಾಜಕಾರಣ ಹಾಗೂ ಸೇವಾ ಮನೋಭಾವದ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದೇಶದಲ್ಲೇ ಅತಿ ದೊಡ್ಡ ಸ್ವಯಂಪ್ರೇರಿತ, ರಾಜಕೀಯೇತರ, ಸಮವಸ್ತ್ರಧಾರಿ ಯುವ ಸಂಘಟನೆ ಮತ್ತು ಶೈಕ್ಷಣಿಕ ಆಂದೋಲನವಾಗಿದೆ. ಯಾವುದೇ ಜಾತಿ, ಧರ್ಮ ಮತ್ತು ಧರ್ಮದ ಭೇದವಿಲ್ಲದೆ ಯುವಕ-ಯುವತಿಯರ ವ್ಯಕ್ತಿತ್ವ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗುವ ಜತೆಗೆ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು. ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಶಿಕ್ಷಕರು ಯಾವುದೇ ವೇತನವಿಲ್ಲದೇ ಸೇವಾ ಮನೋಭಾವದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಆಯುಕ್ತ ಕಲಬುರಗಿ ವಲಯದ ಸಿ.ಬಿ.ಪಾಟೀಲ್ ಮಾತನಾಡಿ, ಸುಂದರ ಬದುಕು ಹಾಗೂ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಸ್ತು, ಕೌಶಲ್ಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಗೊಳ್ಳುವುದರ ಜತೆಗೆ ವಿದ್ಯಾರ್ಥಿ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಹಾಯಕ ಆಯುಕ್ತರಾದ ಸುಧಾಕರ್ ಗುಡಿ ಮಾತನಾಡಿ, ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ತರಬೇತಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಶಿಕ್ಷಕರಿಗೆ ನೀಡಲಾಗುತ್ತಿದೆ. ಈ ತರಬೇತಿ ಶಿಬಿರದಲ್ಲಿ ಜಿಲ್ಲೆಯ 125 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ ಎಂದರು.

ಶಿಬಿರದ ನಾಯಕರಾದ ನಬಿ ಭಗವಾನ್, ಬಾಬುರಾವ್ ನಿಂಬೂರಿ, ಶಂಷಾದ ಬೇಗಂ, ಉಷಾ ಬಾಯಿ ಮತ್ತು ಶಿಬಿರದ ಸಹಾಯಕರಾದ ಮೋನಪ್ಪ ಬಡಿಗೇರ್, ರಂಗಪ್ಪ ಜಿರ್ಲೆ, ಬಸರೆಡ್ಡಿ ಯಾದಗಿರಿ ಇದ್ದರು.

ತರಬೇತಿ ಸಂಸ್ಥೆಯ ಜಿಲ್ಲಾಧ್ಯಕ್ಷ ಸುರೇಶ್ ಸಜ್ಜನ್, ಉಪಾಧ್ಯಕ್ಷ ಗುಂಡಪ್ಪ ತುಂಬಿಗಿ, ಹಣಕಾಸು ಸಮಿತಿ ಮುಖ್ಯಸ್ಥ ದಿನೇಶ್ ಜೈನ್, ಸಂಸ್ಥೆಯ ಯಾದಗಿರಿ ಜಿಲ್ಲೆಯ ಆಯುಕ್ತ ಸಿ.ಎಂ. ಪಟ್ಟೇದಾರ್, ರಾಘವೇಂದ್ರ ಹಳ್ಳಳ್ಳಿ, ಶಿವರಾಜ್ ದೇಶಮುಖ್, ದೈಹಿಕ ಶಿಕ್ಷಕ ಹಾಗೂ ಭಾರತ ಸ್ಕೌಟ್ ಮತ್ತು ಗೈಡ್ಸ್ ಕಾರ್ಯದರ್ಶಿ ಬಸವರಾಜ್ ಗೋಗಿ ಇದ್ದರು.