ಸಾರಾಂಶ
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಆರೋಗ್ಯವಂತ ಸಮಾಜ ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ಮುನಿಯಾಲು ಗ್ರಾಮದ ವೈದ್ಯರಾದ ಡಾ.ಸುದರ್ಶನ್ ಹೆಬ್ಬಾರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಆರೋಗ್ಯಯುತ ಜೀವನವನ್ನು ನಡೆಸಲು ಆರೋಗ್ಯಕರ ಆಹಾರ ಮುಖ್ಯವಾಗಿದೆ ಎಂದು ಮುನಿಯಾಲು ಗ್ರಾಮದ ವೈದ್ಯರಾದ ಡಾ.ಸುದರ್ಶನ್ ಹೆಬ್ಬಾರ್ ತಿಳಿಸಿದರು.ಅವರು ಇಲ್ಲಿನ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಆರೋಗ್ಯವಂತ ಸಮಾಜ ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಇಂದಿನ ವೇಗದ ಯುಗದಲ್ಲಿ ಜನರಿಗೆ ಯಾವ ಆಹಾರವನ್ನು ಸೇವಿಸಬೇಕೆಂಬ ಅರಿವಿಲ್ಲದೇ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಸರಿಯಾದ ಆಹಾರ ಕ್ರಮವನ್ನು ಅರಿತು ಅನುಸರಿಸಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಮಾನವಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ರೋಹಿತ್ ಎಸ್. ಅಮೀನ್, ಸಮಾಜ ಸುಸ್ಥಿರವಾಗಿರಬೇಕಾದರೆ ಆಹಾರವೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸ ಪ್ರಸಾದ್ ಆರ್., ಪ್ರೊ. ಈರಪ್ಪ ಎಸ್. ಮೇದಾರ್ ಹಾಗೂ ಪ್ರೊ. ಅಮೋಘ ಗಾಡ್ಕರ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಸಿ.ಬಿ. ನವೀನ್ ಚಂದ್ರ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ಕಾರ್ಯದರ್ಶಿಗಳಾದ ಭರತ್ ಮತ್ತು ಸುಮಾ ಉಪಸ್ಥಿತರಿದ್ದರು. ಅಶೋಕ ಕಾರ್ಯಕ್ರಮ ನಿರೂಪಿಸಿದರು, ವರ್ಷ ಸ್ವಾಗತಿಸಿದರು. ಜಯಶ್ರೀ ವಂದಿಸಿದರು.