ಸಾರಾಂಶ
ಕುಮಟಾ: ತೆಂಗು ಬೆಳೆಗೆ ಉತ್ತಮ ಭವಿಷ್ಯವಿದೆ. ರೈತರು ತೆಂಗನ್ನು ಹೆಚ್ಚು ಉತ್ಪಾದಿಸಬೇಕು. ತೆಂಗಿನ ಸದ್ಯದ ಬೆಲೆ ಕೂಡ ಆಶಾದಾಯಕವಾಗಿದೆ. ಇದೇ ಬೆಲೆಯನ್ನು ಕಾಯ್ದುಕೊಂಡಲ್ಲಿ ತೆಂಗು ಬೆಳೆಗಾರರು ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ತೆಂಗು ಹಾಗೂ ಡ್ರ್ಯಾಗನ್ ಫ್ರುಟ್ ಕೃಷಿಕ ಕುಪ್ಪು ಗೌಡ ಹೇಳಿದರು.
ಪಟ್ಟಣದ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಾಲಯದಲ್ಲಿ ವಿಶ್ವ ತೆಂಗು ದಿನ ಉದ್ಘಾಟಿಸಿ ಮಾತನಾಡಿದರು.ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ವಿ. ಹೆಗಡೆ ಭದ್ರನ್ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ತೆಂಗು ಬೆಳೆಗೆ ಸಾವಯವ ಗೊಬ್ಬರದ ಜೊತೆಯಲ್ಲಿ ಮುಖ್ಯ ಪೋಷಕಾಂಶವಾದ ಪೊಟ್ಯಾಶ್ ಹಾಗೂ ಬೋರಕ್ಸ್, ಮೆಗ್ನೀಷಿಯಂ ಸಲ್ಫೇಟ್, ಝಿಂಕ್, ಕೃಷಿ ಸುಣ್ಣಗಳ ಬಳಸುವ ಅವಶ್ಯಕತೆ ಇದೆ ಎಂದರು.ಕಾರ್ಯಕ್ರಮದಲ್ಲಿ ತೆಂಗು ಕೊಯ್ಲು ಕೃಷಿ ಕಾರ್ಮಿಕರಿಗೆ ಕೇರ್ ಸುರಕ್ಷಾ ವಿಮಾ ಗುರುತಿನ ಚೀಟಿಯನ್ನು ವಿತರಿಸಿದ ಸಹಾಯಕ ತೋಟಗಾರಿಕಾ ನಿರ್ದೇಶಕ ಲಿಂಗರಾಜ್ ಇತ್ನಾಳ್, ಎವಿಪಿ ಸಂಸ್ಥೆಯು ತಾಲೂಕಿನ ರೈತರಿಗೆ ಹೆಚ್ಚಿನ ಸೇವೆಯನ್ನು ನೀಡುವ ಉತ್ತಮ ಸಂಸ್ಥೆಯಾಗಿದೆ ಎಂದರು. ತೋಟಗಾರಿಕಾ ಇಲಾಖೆಯ ೨೦೨೫-೨೬ ನೇ ಸಾಲಿನ ಸಹಾಯಧನದ ಯೋಜನೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎವಿಪಿ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಕಳೆದ ೧೦ ವರ್ಷಗಳಿಂದ ವಿಶ್ವ ತೆಂಗು ದಿನಾಚರಣೆಯನ್ನು ಎವಿಪಿ ಸಂಸ್ಥೆಯಿಂದ ತೆಂಗಿನ ಬೆಳೆ ಹಾಗೂ ಉಪಯೋಗದ ಜಾಗೃತಿಗಾಗಿ ಆಚರಿಸುತ್ತಾ ಬಂದಿದ್ದೇವೆ. ಕೇರ್ ಸುರಕ್ಷಾ ಗುರುತಿನ ಚೀಟಿಯನ್ನು ಜಿಲ್ಲೆಯ ತೆಂಗು ಕೊಯ್ಲು ಮಾಡುವ ೪೧೦ ಕೃಷಿ ಕಾರ್ಮಿಕರು ಕೇರ್ ಸುರಕ್ಷಾ ವಿಮಾ ಪಾಲಿಸಿ ಪಡೆದಿದ್ದು ಅವರು ಪ್ರತಿವರ್ಷ ಕಾರ್ಡ ನವೀಕರಿಸಿಕೊಳ್ಳಬೇಕು ಹಾಗೂ ಷೇರುದಾರರು, ರೈತರು ಕಂಪನಿಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ರೈತರ ಅಭಿವೃದ್ಧಿ ಜೊತೆಯಲ್ಲಿ ಸಂಸ್ಥೆಯ ಬೆಳವಣಿಗೆ ಹೊಂದಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ತೆಂಗು ಕೃಷಿಯ ಸಮಗ್ರ ಮಾಹಿತಿ ಪತ್ರ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ನಿರ್ದೇಶಕ ಕೃಷ್ಣ ನಾಯ್ಕ, ಈಶ್ವರ ಎಂ. ಕೊಡಿಯಾ, ಸಿ.ಎಂ. ಪಟಗಾರ ವೇದಿಕೆಯಲ್ಲಿದ್ದರು. ರೈತರಾದ ಡಿ.ಕೆ.ಹೆಗಡೆ, ಸುರೇಶ್ ಭಟ್, ಸದಾನಂದ ಪಟಗಾರ, ಶಂಕರ ಗೌಡ ಇದ್ದರು. ಸಂಸ್ಥೆಯ ಎಚ್.ಶಿವರಾಮ್ ಸ್ವಾಗತಿಸಿ, ನಿರೂಪಿಸಿದರು. ಪ್ರತಿಭಾ ವಂದಿಸಿದರು.