ಕ್ರೀಡಾ ಚಟುವಟಿಕೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿ: ಸಲೀಂ ಬೇಗ್

| Published : Jan 19 2025, 02:18 AM IST

ಕ್ರೀಡಾ ಚಟುವಟಿಕೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿ: ಸಲೀಂ ಬೇಗ್
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಶಾಲೆಗಳಲ್ಲೂ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸುವುದು ನಮ್ಮ ಶಿಕ್ಷಣ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಕಳೆದ ತಿಂಗಳು ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಎಲೈಟ್ ಶಾಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು ಎಂದು ನೆನಪಿಸಿಕೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿನಿತ್ಯ ಒಂದು ಗಂಟೆ ಕಾಲ ಆಟವಾಡಿದರೆ ನಾವು ಆರೋಗ್ಯವಂತರಾಗಿರಬಹುದು ಎಂದು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಆಫ್ ಇಂಡಿಯಾ ತೀರ್ಪುಗಾರ ಸಲೀಂ ಬೇಗ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರದಂದು ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಆರೋಗ್ಯವಾಗಿದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಎಲ್ಲರಿಗೂ ಉತ್ತಮ ಆರೋಗ್ಯ ಅಗತ್ಯವಾಗಿದೆ. ಪ್ರಸ್ತುತ ನಮ್ಮ ಮನಸ್ಥಿತಿ ಹೇಗಿದೆಯೆಂದರೆ ನಾವು ಯಾವುದಕ್ಕೂ ಬೇಗ ತೀರ್ಮಾನ ತೆಗೆದುಕೊಳ್ಳುತ್ತೇವೆ. ಆದರೆ ಒಬ್ಬ ಕ್ರೀಡಾಪಟು ದಿನ ಸೋಲುತ್ತಾನೆ, ದಿನವೂ ಗೆಲ್ಲುತ್ತಾನೆ. ನಂತರ ಇನ್ನಷ್ಟು ತರಬೇತಿ ಪಡೆದುಕೊಂಡು ಮುಂದೆ ಬರುತ್ತಾನೆ. ಕ್ರೀಡಾಪಟು ಆರೋಗ್ಯಕರವಾಗಿರುತ್ತಾನೆ. ಯಾವುದೇ ವಿಚಾರ ಆಗಿರಲಿ ದುಡುಕುವುದಿಲ್ಲ. ಹಾಗೆಯೇ ಕೆಟ್ಟ ದಾರಿಯನ್ನೂ ಅಷ್ಟು ಬೇಗ ಹಿಡಿಯುವುದಿಲ್ಲ ಎಂದರು.

ಪ್ರಸ್ತುತ ಮನುಷ್ಯನು ಚಿಕ್ಕ ವಯಸ್ಸಿನಲ್ಲಿಯೇ ಆತ್ಮಹತ್ಯೆಯಂಥ ದಾರಿ ಹಿಡಿಯುತ್ತಿದ್ದಾನೆ. ಆದರೆ ಒಬ್ಬ ಕ್ರೀಡಾಪಟು ಅಂಥ ದಾರಿಯತ್ತ ಸುಳಿಯುವುದಿಲ್ಲ, ಕ್ರೀಡೆ ಎಂಬುದು ಪ್ರತಿಯೊಬ್ಬರಿಗೂ ಅಗತ್ಯವಿದೆ. ಪೋಷಕರು ಸೇರಿದಂತೆ ಎಲ್ಲರೂ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಎಂದು ಸಲಹೆ ನೀಡಿದರು.

ಉತ್ತಮ ಆರೋಗ್ಯ ಇಲ್ಲದಿದ್ದರೆ ಯಾವ ಸಾಧನೆಯೂ ಸಾಧ್ಯವಿಲ್ಲ. ಅಂಕಗಳನ್ನು ಹೆಚ್ಚು ತೆಗೆದುಕೊಂಡು ಅಮೆರಿಕಾಕ್ಕೆ ಹೋದರೂ ಉತ್ತಮ ಆರೋಗ್ಯ ಇಲ್ಲದಿದ್ದರೆ ಏನು ಸಾಧನೆ ಸಾಧ್ಯ ಎಂದರು.

ಜಿಲ್ಲಾ ದೈಹಿಕ ಅಧಿಕಾರಿ ಮಹಾದೇವ್ ಮಾತನಾಡಿ, ಮಕ್ಕಳಲ್ಲಿ ಇರುವ ಸೂಕ್ತ ಪ್ರತಿಭೆಯನ್ನು ಹೊರತರಲು ಈ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಯಾವ ಕ್ರೀಡಾಪಟು ಅತ್ಯುನ್ನತ ಸ್ಥಾನ ಪಡೆಯುತ್ತಾನೆ ಹಾಗೂ ಮುಂದೆ ಆತನಿಗೆ ಯಾವ ರೀತಿ ತರಬೇತಿ ನೀಡಬೇಕು ಎಂಬ ಬಗ್ಗೆ ಕೂಟದಲ್ಲಿ ತಿಳಿಯಲಾಗುತ್ತದೆ ಎಂದರು.

ಎಲ್ಲಾ ಶಾಲೆಗಳಲ್ಲೂ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸುವುದು ನಮ್ಮ ಶಿಕ್ಷಣ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಕಳೆದ ತಿಂಗಳು ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಎಲೈಟ್ ಶಾಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು ಎಂದು ನೆನಪಿಸಿಕೊಂಡರು.

ಎಲೈಟ್ ಶಾಲೆ ಕಾರ್ಯದರ್ಶಿ ಎಚ್.ಪಿ. ಕಿರಣ್ ಮಾತನಾಡಿ, ಸ್ಟ್ರಾಂಗ್ ಮೈಂಡ್ ಇರಬೇಕೆಂದರೆ ದೈಹಿಕ ಸಾಮರ್ಥ್ಯ ತುಂಬ ಅಗತ್ಯ. ಈ ಸಾಮರ್ಥ್ಯದಿಂದಲೇ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮ ನಿಜವಾದ ಆಸ್ತಿ ಎಂದರೆ ನಿಮ್ಮ ದೇಹ, ನಿಮ್ಮ ಆರೋಗ್ಯ. ನೀವು ಆರೋಗ್ಯವಾಗಿದ್ದರೆ ಖಂಡಿತ ನೀವು ಎಲ್ಲವನ್ನೂ ಸಾಧಿಸಬಹುದು. ಮೊದಲು ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಿಮ್ಮಲ್ಲಿರುವ ಸಲ್ಪ ಜಾಗದಲ್ಲಿಯೇ ಬೆಳಗಿನ ಜಾವ ದೇಹಕ್ಕೆ ಸಲ್ಪ ಶ್ರಮ ನೀಡಬೇಕು. ನೀವು ಎಷ್ಟು ಆರೋಗ್ಯಕರವಾಗಿರುತ್ತೀರೋ, ಅಷ್ಟೇ ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ. ಯಾವುದಾದರೂ ಒಂದು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಒಂದು ದೊಡ್ಡ ವಿಚಾರ ಎಂದು ಹೇಳಿದರು.

ಮೊದಲು ಕ್ರೀಡಾ ಧ್ವಜಾರೋಹಣ ನಡೆಸಿದರು. ಇದಾದ ನಂತರ ಎಲೈಟ್ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಎಲೈಟ್ ಶಾಲೆಯ ಅಧ್ಯಕ್ಷೆ ಸ್ವಪ್ನ ಕಿರಣ್, ಪ್ರಾಂಶುಪಾಲೆ ಕ್ರಿಸ್ಟಿನಾ ಇತರರು ಉಪಸ್ಥಿತರಿದ್ದರು.