ಉತ್ತಮ ಆಹಾರ ಪದ್ಧತಿಯಿಂದ ಉತ್ತಮ ಆರೋಗ್ಯ

| Published : Jul 01 2024, 01:48 AM IST

ಉತ್ತಮ ಆಹಾರ ಪದ್ಧತಿಯಿಂದ ಉತ್ತಮ ಆರೋಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಹೃದಯ ತಜ್ಞ ಡಾ.ಅರುಣಕುಮಾರ ಮಾತನಾಡಿ ಹಲವು ಆರೋಗ್ಯಕರ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಇಂದು ಜನರ ಜೀವನ ಪದ್ಧತಿ, ಆಹಾರ ಪದ್ಧತಿ ಬದಲಾವಣೆಯಾಗಿರುವುದರಿಂದಾಗಿ ಬಹುತೇಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರೂ ಆರೋಗ್ಯಕರವಾಗಿರಲು ತಮ್ಮ ಜೀವನ ಪದ್ಧತಿ, ಆಹಾರ ಪದ್ಧತಿಯನ್ನು ಉತ್ತಮವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಜೀವನ ಸಾಗಿಸಬಹುದು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಹೃದಯ ತಜ್ಞ ಡಾ.ಅರುಣಕುಮಾರ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಸ್ಥಳೀಯ ಅಮರೇಶ್ವರ ಕ್ಲಿನಿಕ್ ವೈದ್ಯರ ದಿನಾಚರಣೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಬಹುತೇಕರು ಹೊರಗಿನ ಆಹಾರ ಪದಾರ್ಥಗಳಿಗೆ ಮಾರುಹೋಗುತ್ತಿದ್ದಾರೆ. ಜನರು ಆಹಾರದಲ್ಲಿ ತರಕಾರಿ, ಹಣ್ಣು-ಹಂಪಲು ಕಡಿಮೆ ಬಳಸುತ್ತಿರುವುದರಿಂದಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೈಹಿಕ ಪರಿಶ್ರಮವೂ ಕಡಿಮೆಯಾಗುತ್ತಿದೆ. ಉತ್ತಮ ಆಹಾರ ಪದ್ಧತಿ, ನಿರಂತರ ವ್ಯಾಯಾಮ, ದುಶ್ಚಟಗಳಿಂದ ದೂರ ಈ ಮೂರನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಧೂಮಪಾನ, ಮಧ್ಯಪಾನದಿಂದ ದೂರವಿದ್ದರೆ ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು ಎಂದರು.

ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಜನರ ಆರೋಗ್ಯಕರ ಜೀವನಕ್ಕೆ ಪೌರಕಾರ್ಮಿಕರ ಸೇವೆ ಶ್ಲಾಘನೀಯ. ಕೋವಿಡ್‌ದಂತಹ ಕಾಲಘಟ್ಟದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ. ಇವರು ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ತಮ್ಮ ಸೇವೆ ಮಾಡಬೇಕು. ನಿರಂತರವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಪೌರಕಾರ್ಮಿಕರು ಸೇರಿದಂತೆ ಯಾರಿಗೆ ಹೃದಯ ಸಂಬಂಧಿತ ಕಾಯಿಲೆಯ ಬಂದರೆ ಜಯದೇವ ಆಸ್ಪತ್ರೆಗೆ ಬಂದು ನನ್ನನ್ನು ಸಂಪರ್ಕಿಸಿದರೆ ಖಂಡಿತ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದಾಗಿ ಹೇಳಿದರು.

ಅಮರೇಶ್ವರ ಕ್ಲಿನಿಕ್‌ದ ಡಾ.ಅಮರೇಶ ಮಿಣಜಗಿ ಮಾತನಾಡಿ, ಪೌರಕಾರ್ಮಿಕರು ಬೆಳ್ಳಂಬೆಳಗೆ ಊರಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಚ್ಛ ಪರಿಸರ ಇಡುವದರಿಂದಾಗಿ ಜನರು ಆರೋಗ್ಯದಿಂದ ಇರುವಲ್ಲಿ ತಮ್ಮದೇ ಪಾತ್ರ ವಹಿಸುತ್ತಾರೆ. ಇಂತಹ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಕ್ಲಿನಿಕ್‌ದಿಂದ ಉಚಿತ ಆರೋಗ್ಯ ತಪಾಸಣೆ ಮಾಡುವ ಮೂಲಕ ಅಳಿಲು ಸೇವೆ ಸಲ್ಲಿಸಲಾಗುತ್ತಿದೆ. ಎಲ್ಲರ ಆರೋಗ್ಯ ಸದೃಢವಾಗಿದ್ದರೆ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಯಾರಿಗಾದರೂ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಕೂಡಲೇ ಅವರು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವದು ಅವಶ್ಯಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ಪುರಸಭೆಯಿಂದ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಆರೋಗ್ಯದ ತಪಾಸಣೆ ಮಾಡಿಸಲಾಗುತ್ತಿದೆ. ಚುನಾವಣೆ ಬಂದಿದ್ದರಿಂದ ಆರೋಗ್ಯ ತಪಾಸಣೆ ಮಾಡಿಸಲು ಸಾಧ್ಯವಾಗಿರಲಿಲ್ಲ. ಅಮರೇಶ್ವರ ಕ್ಲಿನಿಕ್ ದವರು ಬಂದು ತಪಾಸಣೆ ಮಾಡುತ್ತಿರುವುದು ಒಳ್ಳೆಯದಾಗಿದೆ. ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡುತ್ತಿರುವುದು ಸಾಮಾಜಿಕ ಕಳಕಳಿಯಾಗಿದೆ. ಪ್ರತಿಯೊಬ್ಬರಲ್ಲಿ ಸಾಮಾಜಿಕ ಸೇವೆ ಮಾಡುವ ಭಾವ ಬರಬೇಕಿದೆ. ಜನರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಜೊತೆಗೆ ಪೌರಕಾರ್ಮಿಕರ ಪಾತ್ರವೂ ಇದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಎಸ್.ಎಸ್.ಡಂಬಳ, ಡಾ.ಮುದ್ದಸಿರ ಇಂಡಿಕರ, ಪುರಸಭೆ ಕಿರಿಯ ಅಭಿಯಂತರ ಮಹಾದೇವ ಜಂಬಗಿ ಇತರರು ಇದ್ದರು.

ಶಿಕ್ಷಕ ಎಚ್.ಬಿ.ಬಾರಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ ಸ್ವಾಗತಿಸಿ,ನಿರೂಪಿಸಿ,ವಂದಿಸಿದರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಪೌರಕಾರ್ಮಿಕರ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಇತರೇ ಕಾಯಿಲೆಗಳ ಕುರಿತು ವೈದ್ಯರು ತಪಾಸಣೆ ಮಾಡಿದರು.