ಸಾರಾಂಶ
ತಾಯಿ, ಶಿಶು ಮರಣ, ರಕ್ತಹೀನತೆ ಹೋಗಲಾಡಿಸುವುದು ಈ ಪೋಷಣ ಅಭಿಯಾನದ ಮುಖ್ಯಉದ್ದೇಶವಾಗಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಹೇಳಿದರು.
ಯಲಬುರ್ಗಾ: ಪ್ರತಿಯೊಬ್ಬರೂ ಅಂಗನವಾಡಿ ಕೇಂದ್ರದಿಂದ ನೀಡುವ ಪೂರಕ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಹೇಳಿದರು
ಪಟ್ಟಣದ ಸಿದ್ದರಾಮೇಶ್ವರ ನಗರದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ವತಿಯಿಂದ ಆಯೊಜಿಸಿದ್ದ ಪೋಷಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.ತಾಯಿ, ಶಿಶು ಮರಣ, ರಕ್ತಹೀನತೆ ಹೋಗಲಾಡಿಸುವುದು ಈ ಪೋಷಣ ಅಭಿಯಾನದ ಮುಖ್ಯಉದ್ದೇಶವಾಗಿದೆ ಎಂದರು.ಪ್ರತಿವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಳ್ಳಲಾಗುವ ಪೋಷಣ ಅಭಿಯಾನದಲ್ಲಿ ಗರ್ಭಿಣಿಗೆ ಸೀಮಂತ, ತಾಯಂದಿರಿಗೆ ಎದೆಹಾಲು ಉಣಿಸುವ ಬಗ್ಗೆ ಅರಿವು, ಮಕ್ಕಳ ವಿವಿಧ ಹಂತದ ಬೆಳವಣಿಗೆಯ ಬಗ್ಗೆ ಜಾಗೃತಿ, ಮಕ್ಕಳಿಗೆ ತಿನಿಸುವ ಆಹಾರ ಪ್ರಮಾಣ, ಬಳಕೆ ಹಾಗೂ ಪೌಷ್ಟಿಕಾಂಶ ಆಹಾರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಆರೋಗ್ಯ ನೀಡಿ ಆರೋಗ್ಯಯುತ ಸಮಾಜ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.
ಅಂಗನವಾಡಿ ಮೇಲ್ವಿಚಾರಕಿ ಮಾಧವಿ ವೈದ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅತಿಯಾದ ಬೇಕರಿ ಪದಾರ್ಥ, ಮಾದಕ ವಸ್ತುಗಳ ಸೇವನೆಯಿಂದಾಗಿ ನಮ್ಮ ಆರೋಗ್ಯ ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆರೋಗ್ಯಕರ ಬದುಕಿಗೆ ಸಮತೋಲಿತ ಆಹಾರ ಸೇವನೆ ಮುಖ್ಯ ಎಂದರು.ಪಟ್ಟಣ ಪಂಚಾಯಿತಿ ಸದಸ್ಯ ಶ್ರೀದೇವಿ ದೊಡ್ಡಯ್ಯ ಗುರುವಿನ್ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕೇಂದ್ರದ ಹಿರಿಯ ಮೇಲ್ವಿಚಾರಕಿ ಚೆನ್ನಮ್ಮ, ಲಲಿತಾ ನಾಯಕ್, ಶಿವಪುತ್ರಮ್ಮ ಅಂಗಡಿ, ಸವಿತಾ, ಅಂಗನವಾಡಿ ಕಾರ್ಯಕರ್ತರು ಗರ್ಭಿಣಿಯರು ಇದ್ದರು.