ಸಾರಾಂಶ
ಯಲ್ಲಾಪುರ: ಯಜ್ಞ ಮತ್ತು ತಪಸ್ಸಿನಿಂದ ಉತ್ತಮ ಜೀವನ ಸಾಧ್ಯ. ಪರಂಪರೆಯ ಹಿನ್ನೆಲೆಯಿಂದ ಬಂದ ಬ್ರಾಹ್ಮಣ್ಯದ ರಕ್ಷಣೆ ಇಂದಿನ ತುರ್ತು ಅಗತ್ಯ. ಸಂಸ್ಕಾರವು ಬ್ರಾಹ್ಮಣ ಸಮುದಾಯದ ಮೂಲ ಧ್ಯೇಯವಾಗಿದೆ ಎಂದು ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವಸ್ಥಾನ ಆವರಣದಲ್ಲಿ ಹವ್ಯಕ ಜಾಗೃತಿ ಪಡೆಯು ಆಯೋಜಿಸಿದ್ದ ಸರ್ವರ ಹಿತಕ್ಕಾಗಿ ಬ್ರಾಹ್ಮಣ್ಯ ಉಳಿಸೋಣ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿ, ಜ್ಞಾನವಂತಿಕೆಯ ಬ್ರಾಹ್ಮಣ್ಯದ ರಕ್ಷಣೆ ಕ್ಷೀಣಿಸಬಾರದು. ಬ್ರಾಹ್ಮಣ್ಯದ ರಕ್ತ ಗುಣ ಅಧ್ಯಯನ ಅನುಷ್ಠಾನವಾಗಿದೆ. ನಮ್ಮ ಪ್ರಕೃತಿಯ ಸಮತೋಲನಕ್ಕೆ ಬ್ರಾಹ್ಮಣ ಸಮುದಾಯದ ಅನುಷ್ಠಾನ ತೀರಾ ಮುಖ್ಯವಾಗಿದೆ. ಲೋಕದ ಹಿತಕ್ಕಾಗಿ ಬ್ರಾಹ್ಮಣ ಜನ್ಮ ಉಳಿಸೋಣ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಹವ್ಯಕ ಜಾಗೃತಿ ಪಡೆಯ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ಅವರು, ಹವ್ಯಕ ಶಾಸ್ತ್ರಗಳಲ್ಲಿ ೩೨ ಜನ್ಮ ದಾಟಿ ಬಂದ ಮೇಲೆ ಮನುಷ್ಯ ಜನ್ಮ ಸಿಗಲಿದೆ. ಜನ್ಮ ವ್ಯರ್ಥವಾಗಿ ಹಾಳಾಗಬಾರದು. ಹೊಳೆಯ ನೀರಿನ ಮಹತ್ವ ಗೊತ್ತಿರುವ ಹಾಗೆ ಬ್ರಾಹ್ಮಣದ ಮಹತ್ವ ಗೊತ್ತಿರಬೇಕು ಎಂದರು.
ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ವಿಜ್ಞಾನಿ ಪ್ರಮೋದ ಗಾಯಿ ಉಪನ್ಯಾಸ ನೀಡಿ, ಆನುವಂಶಿಕತೆಯಲ್ಲಿ ವೈಜ್ಞಾನಿಕತೆ ಇದೆ. ಬ್ರಾಹ್ಮಣರು ಸರ್ವರ ಹಿತಕ್ಕಾಗಿ ಶ್ರಮಿಸುತ್ತಾರೆ ಎಂದರು.ಅನಂತ ಮೂರ್ತಿ ಭಟ್ಟ, ಎಲೂಗಾರ, ಶಂಕರ ಭಟ್ಟ ಬಾಲಿಗದ್ದೆ, ವೈದಿಕ ಪರಿಷತ್ ಅಧ್ಯಕ್ಷ ಶ್ರೀಪಾದ ಉಪಾದ್ಯ ಮಾತನಾಡಿದರು. ದತ್ತಾತ್ರೇಯ ಹೆಗಡೆ ಸ್ವಾಗತಿಸಿದರು. ಮಾತೃ ಮಂಡಳಿಯ ಮಹಾಲಕ್ಷ್ಮಿ ಗಾಂವ್ಕರ್ ಸಾಂಬೇಮನೆ ನಿರೂಪಿಸಿದರು.ಚಿತ್ರಾಪುರದಲ್ಲಿ ಅಂಬೇಡ್ಕರ್ ಕಾಲನಿ ವೃತ್ತ ಉದ್ಘಾಟನೆ
ಭಟ್ಕಳ: ಶಿರಾಲಿ ಗ್ರಾಪಂ ವ್ಯಾಪ್ತಿಯ ಚಿತ್ರಾಪುರದ ಬಾಕಡಕೇರಿಯಲ್ಲಿ 207ನೇ ಐತಿಹಾಸಿಕ ಭೀಮ್ ಕೋರೆಗಾಂವ್ ಯುದ್ಧದ ವಿಜಯೋತ್ಸವ ದಿನಾಚರಣೆಯಂದು ಬಾಕಡಕೇರಿ ಎಂಬ ಹೆಸರನ್ನು ಅಂಬೇಡ್ಕರ್ ಕಾಲನಿ ಎಂದು ಸ್ಥಳೀಯರು ಮರುನಾಮಕರಣ ಮಾಡಿದ್ದಾರೆ.ಕಾಲನಿಯ ಹಿರಿಯರಾದ ಕೃಷ್ಣ ಬಾಕಡ ಅವರು ರಿಬ್ಬನ್ ಕತ್ತರಿಸುವ ಮೂಲಕ ಮತ್ತು ಮಾಸ್ತಿ ಬಾಕಡ ಅವರು ದೀಪ ಬೆಳಗಿಸುವ ಮೂಲಕ ನೂತನವಾಗಿ ನಿರ್ಮಿಸಿದ ಅಂಬೇಡ್ಕರ್ ಕಾಲನಿ ವೃತ್ತವನ್ನು ಉದ್ಘಾಟಿಸಿ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮತ್ತು ಸಮಾನತೆಗೆ ಒತ್ತು ನೀಡಿದ್ದರು. ನಾವು ಎಲ್ಲರೂ ವಿದ್ಯಾವಂತರಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕೆಂಬುದೇ ನಮ್ಮೆಲ್ಲರ ಉದ್ದೇಶ. ಹೀಗಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.ಸ್ಥಳೀಯರಾದ ಮಂಜು ಬಾಕಡ ಮಾತನಾಡಿ, ಬಾಕಡಕೇರಿಯಲ್ಲಿ 250ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರ ಮನೆಗಳು ಇದ್ದು, ಇಲ್ಲಿನ ಹಿರಿಯ ದಲಿತ ಮುಖಂಡರು, ಮಹಿಳೆಯರು ಮತ್ತು ಯುವಕರು ಎಲ್ಲರೂ ಸೇರಿ ಚರ್ಚಿಸಿ ನಮ್ಮ ಕೇರಿಗೆ ಅಂಬೇಡ್ಕರ್ ಹೆಸರು ಇಡಲು ನಿರ್ಧಾರ ಮಾಡಿದ್ದೇವೆ ಎಂದರು.ಗ್ರಾಪಂ ಸದಸ್ಯ ಸುರೇಶ ಬಾಕಡ, ಶ್ರೀ ಚೌಡೇಶ್ವರಿ ಮಸಣಕಾಳಿ ದೇವಸ್ಥಾನ ಪ್ರಧಾನ ಅರ್ಚಕ ನಾರಾಯಣ ಬಾಕಡ, ಬಸವ ಬಾಕಡ, ಗಣಪತಿ ಬಾಕಡ, ಶಂಕರ ಬಾಕಡ, ರಾಮ ಬಾಕಡ, ಕೃಷ್ಣ ಬಾಕಡ ಇತರರಿದ್ದರು. ಮಂಜುನಾಥ ಬಾಕಡ ಸ್ವಾಗತಿಸಿದರು. ಹರೀಶ ಮಾಸ್ತಿ ಬಾಕಡ ಕಾರ್ಯಕ್ರಮ ನಿರೂಪಿಸಿದರು. ಗಣಪತಿ ಬಾಕಡ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ಮತ್ತು ಭಾಸ್ಕರ ವಂದಿಸಿದರು.