ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಮೈಸೂರು ರಸ್ತೆಯ ಕೆ.ಬಿ.ಸಿ ಪೆಟ್ರೋಲ್ ಬಂಕ್ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಡಿಕೆಶಿ ಪದಗ್ರಹಣ ಕಾರ್ಯಕ್ರಮದ ನೇರ ವೀಕ್ಷಣೆಗಾಗಿ ಪಟ್ಟಣದ ಪ್ರವಾಸಿ ಮಂದಿರದ ಆವರಣ ಮತ್ತು ಪ್ರವಾಸಿ ಮಂದಿರ ವೃತ್ತದಲ್ಲಿ ಬೃಹತ್ ಎಲ್‌ಇಡಿ ಟಿವಿ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಶುಭಕೋರಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

ಪಟ್ಟಣದ ಹೇಮಾವತಿ ವೃತ್ತದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್ ಮತ್ತು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಮೈಸೂರು ರಸ್ತೆಯ ಕೆ.ಬಿ.ಸಿ ಪೆಟ್ರೋಲ್ ಬಂಕ್ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಡಿಕೆಶಿ ಪದಗ್ರಹಣ ಕಾರ್ಯಕ್ರಮದ ನೇರ ವೀಕ್ಷಣೆಗಾಗಿ ಪಟ್ಟಣದ ಪ್ರವಾಸಿ ಮಂದಿರದ ಆವರಣ ಮತ್ತು ಪ್ರವಾಸಿ ಮಂದಿರ ವೃತ್ತದಲ್ಲಿ ಬೃಹತ್ ಎಲ್‌ಇಡಿ ಟಿವಿ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿತ್ತು.

ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಮತ್ತಿತರರು ನೂತನ ಮುಖ್ಯಮಂತ್ರಿಗಳಿಗೆ ಶುಭಕೋರಿದರು. ನೂತನ ಮುಖ್ಯಮಂತ್ರಿಗಳಿಗೆ ಶುಭಕೋರಿ ಪಟ್ಟಣದ ಪ್ರಮುಖ ರಸ್ತೆಗಳ ಉದ್ದಗಲಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಫ್ಲೆಕ್ಸ್ ಗಳನ್ನು ಅಳವಡಿಸಿದ್ದು ಪಟ್ಟಣದ ಪ್ರಮುಖ ರಸ್ತೆಗಳು ಡಿಕೆಶಿ ಮಯವಾಗಿದ್ದವು.

ನೂತನ ಸಿಎಂ ಡಿಕೆಶಿಗೆ ರೈತಸಂಘದಿಂದ ಅಭಿನಂದನೆ

ಕೆ.ಆರ್.ಪೇಟೆ:ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಡಿ.ಕೆ.ಶಿವಕುಮಾರ್ ಅವರನ್ನು ತಾಲೂಕು ರೈತಸಂಘ ಅಭಿನಂದಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ತಾಲೂಕು ರೈತಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಡಿ.ಕೆ.ಶಿವಕುಮಾರ್ ಮೂಲತಃ ರೈತ ಕುಟುಂಬಕ್ಕೆ ಸೇರಿದವರು. ಒಕ್ಕಲು ಮನೆತನಕ್ಕೆ ಸೇರಿರುವ ಮುಖ್ಯಮಂತ್ರಿಗಳಿಗೆ ರೈತರ ಸಮಸ್ಯೆಗಳ ಅರಿವಿದೆ. ಮುಖ್ಯಮಂತ್ರಿಯಾಗುವ ಮೊದಲ ಹೆಜ್ಜೆಯಲ್ಲಿಯೇ ಪಕ್ಷಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಆಡಳಿತ ನಡೆಸುವತ್ತ ಅವರು ಹೆಜ್ಜೆಯಿಟ್ಟಿದ್ದು, ನೂತನ ಮುಖ್ಯಮಂತ್ರಿಗಳ ಹುಮ್ಮಸ್ಸು ನೋಡಿದರೆ ರಾಜ್ಯದ ಜನರಿಗೆ ಏನಾದರೂ ಒಳ್ಳೆಯದನ್ನು ಮಾಡುವ ಮನಸ್ಸು ಇರುವಂತಿದೆ.ನೂತನ ಮುಖ್ಯಮಂತ್ರಿಗಳು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸುವತ್ತ ಆಲೋಚಿಸಬೇಕು. ವಿದ್ಯುತ್ ಖಾಸಗೀಕರಣ ನೀತಿಯನ್ನು ಕೈಬಿಟ್ಟು ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಬೇಕು. ಸರ್ಕಾರಿ ಕಚೇರಿಗಳು ಭ್ರಷ್ಟರ ಬೀಡಗಾಗಿದೆ. ಇದರಿಂದ ಮುಕ್ತಗೊಳಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಖಾಸಗಿಯವರ ಹಿಡಿತದಿಂದ ಬಿಡುಗಡೆ ಮಾಡಿ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಂಡಬೇಕು. ನೂತನ ಮುಖ್ಯಮಂತ್ರಿಗಳು ಕಾರ್ಪೋರೇಟ್ ರಾಜಕಾರಣ ಮನಸ್ಥಿತಿಯಿಂದ ಹೊರಬಂದು ರೈತನ ಮಿತ್ರರಾಗಿ ಕೆಲಸ ಮಾಡುವಂತೆ ಪುಟ್ಟೇಗೌಡ ಮನವಿ ಮಾಡಿದ್ದಾರೆ.