ಸಾರಾಂಶ
ಈಚಿನ ದಿನಗಳಲ್ಲಿ ಇಬ್ಬನಿಯಿಂದ ಹೂವು ಸ್ವಲ್ಪ ಪ್ರಮಾಣದಲ್ಲಿ ಉದುರಿಹೋಗಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಬಾರಿ ಉತ್ತಮ ಮಾವಿನ ಫಸಲು ನಿರೀಕ್ಷಿಸಲಾಗಿದ್ದರೆ, ಹಳಿಯಾಳ ಮತ್ತು ಅಂಕೋಲಾದಲ್ಲಿ ಮಾವಿನ ಹೂವು ಹಾಗೂ ಮಿಡಿ ಉದುರುತ್ತಿದ್ದು, ಕೆಲವೆಡೆ ಮಾವಿನ ಮರ ಚಿಗುರೊಡೆಯುತ್ತಿದ್ದು, ಫಸಲು ಇಳಿಮುಖವಾಗುವ ಸಾಧ್ಯತೆ ಇದೆ.
ಹಳಿಯಾಳದಲ್ಲಿ 786 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈಚಿನ ದಿನಗಳಲ್ಲಿ ಇಬ್ಬನಿಯಿಂದ ಹೂವು ಸ್ವಲ್ಪ ಪ್ರಮಾಣದಲ್ಲಿ ಉದುರಿಹೋಗಿದೆ. ಇದರಿಂದ ಇಳಿವರಿ ಕಡಿಮೆಯಾಗುವ ಆತಂಕ ಎದುರಾಗಿದೆ.ಮುಂಡಗೋಡದಲ್ಲಿ ಉತ್ತಮ:
ಈ ಬಾರಿ ತಾಲೂಕಿನಲ್ಲಿ ಮಾವಿನ ಫಸಲು ಉತ್ತಮವಾಗಿ ಬಂದಿದೆ. ಎತ್ತ ನೋಡಿದರೂ ಮಾವಿನ ಗೊಂಚಲು ಕಾಣುತ್ತಿವೆ. ಪ್ರತಿ ಬಾರಿ ಈ ವೇಳೆಗೆ ಮೂಡು ಗಾಳಿ ಸೇರಿದಂತೆ ಹವಾಮಾನ ವೈಪರೀತ್ಯದಿಂದ ಬಿಟ್ಟ ಹೂವು ಭಾರೀ ಪ್ರಮಾಣದಲ್ಲಿ ಉದುರಿ ಬೆಳೆಯಲ್ಲಿ ಕುಂಠಿತ ಕಾಣಿಸಿಕೊಳ್ಳುವುದು ಸೇರಿದಂತೆ ಅನೇಕ ತೊಂದರೆಗಳನ್ನು ಇಲ್ಲಿಯ ಮಾವು ಬೆಳೆಗಾರರು ಅನುಭವಿಸುತ್ತಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ರೀತಿ ಪ್ರಕೃತಿ ವಿಕೋಪವಾಗದೇ ಇರುವುದರಿಂದ ಯಾವುದೇ ರೋಗಗಳು ಇದುವರೆಗೂ ಕಾಣಿಸಿಕೊಂಡಿಲ್ಲ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇಲ್ಲಿಯ ಮಾವು ಬೆಳೆಗಾರರಿದ್ದಾರೆ.ಸಿಂದೂಲಾ, ಮಾನಕೂರ, ಆಪೂಸ್, ಪೈರಿ, ಮಲಗೋಬಾ, ಕರಿ ಇಷಾಡ್ ಮುಂತಾದ ತಳಿಯ ಮಾವಿನಹಣ್ಣು ಇಲ್ಲಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ಲದೇ ವಿವಿಧ ರಾಜ್ಯಗಳ ಪಾನಿಯ ಕಂಪನಿಗಳಿಗೂ ರಫ್ತು ಮಾಡಲಾಗುತ್ತದೆ.
ತಾಲೂಕಿನಲ್ಲಿ ಸುಮಾರು 2500 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಅಂಕೋಲಾದಲ್ಲಿ ಸುಪ್ರಸಿದ್ಧ ಕರಿ ಈಷಾಡ್ ತಳಿಯ ಮಾವು ಬೆಳೆಯಲಾಗುತ್ತದೆ. ಈ ಬಾರಿ ಮೋಡ ಕವಿದ ವಾತಾವರಣ, ಮಳೆಯಿಂದ ಹೂವು, ಮಿಡಿ ಉದುರಿಹೋಗಿದೆ. ಹಾಗಾಗಿ ಇಳುವರಿ ಕಡಿಮೆ ಆಗಲಿದೆ. ಮಾವಿನ ಮರಗಳೂ ಸಹ ಚಿಗುರುತ್ತಿದೆ.