ಈ ಸಲದ ಬಜೆಟ್‌ನಲ್ಲಿ ಪತ್ರಿಕಾ ವಿತರಕರಿಗೆ ಸಿಹಿ ಸುದ್ದಿ

| Published : Mar 04 2025, 12:31 AM IST

ಸಾರಾಂಶ

ಪತ್ರಿಕಾ ವಿತರಕರ ಒಕ್ಕೂಟದ ಕ್ಷೇಮಾಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ ಈ ಸಲದ ಬಜೆಟ್‌ನಲ್ಲಿ ಸಿಹಿ ಸುದ್ದಿ ದೊರಕುತ್ತದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪತ್ರಿಕಾ ವಿತರಕರ ಒಕ್ಕೂಟದ ಕ್ಷೇಮಾಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ ಈ ಸಲದ ಬಜೆಟ್‌ನಲ್ಲಿ ಸಿಹಿ ಸುದ್ದಿ ದೊರಕುತ್ತದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ತಿಳಿಸಿದರು.

ಪಟ್ಟಣದ ನವೋದಯ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪತ್ರಿಕಾ ವಿತರಕರು ಸಂಘಟಿತರಾಗಬೇಕು. ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಮುಖ್ಯಮಂತ್ರಿ ಮಾತೃಹೃದಯ ಹೊಂದಿದ್ದಾರೆ. ಪತ್ರಕರ್ತರ ಕಷ್ಟ- ಸುಖಕ್ಕೆ ಸ್ಪಂದಿಸುತ್ತಾರೆ. ವಿತರಕರು ಸೂರ್ಯವಂಶದವರು, ಸೂರ್ಯ ಹುಟ್ಟುವ ಮೊದಲೇ ತಮ್ಮ ದಿನನಿತ್ಯದ ಕೆಲಸಕ್ಕೆ ಹಾಜರಾಗುತ್ತಾರೆ. ಎಷ್ಟೇ ಸಮಸ್ಯೆಗಳಿದ್ದರೂ ಕೂಡ ತಮ್ಮ ಕಾಯಕ ಮರೆಯುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಶಿವಲಿಂಗೇಗೌಡ ಮಾತನಾಡಿ, ಸಮಾಜದಲ್ಲಿರುವ ಲೋಪ ದೋಷ ತಿದ್ದಿ, ಮಾರ್ಗದರ್ಶನ ನೀಡುವಲ್ಲಿ ಪತ್ರಿಕಾ ರಂಗದ ಪಾತ್ರ ಮುಖ್ಯವಾದುದು ಎಂದು ಹೇಳಿದರು.

ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಬೇಕಿದೆ. ಮಾಧ್ಯಮ ಕ್ಷೇತ್ರ ಚೆನ್ನಾಗಿದ್ದರೆ ರಾಜ್ಯ ಪ್ರಗತಿ ಹೊಂದುತ್ತದೆ ಎಂದರು. ಸಮಾಜವನ್ನು ತಿದ್ದುವ ಮಾಧ್ಯಮ ಕ್ಷೇತ್ರ ಎಂದಿಗೂ ಸೊರಗಬಾರದು. ಚಳಿ, ಮಳೆ, ಗಾಳಿ ಎನ್ನದೇ ನಿತ್ಯ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಕಾಯಕವನ್ನು ವಿತರಕರು ಮಾಡುತ್ತಾರೆ. ಕ್ಷೇಮಾಭಿವೃದ್ಧಿ ನಿಧಿಗೆ ಬಜೆಟ್‌ನಲ್ಲಿ ಹಣ ನೀಡುವ ಮೂಲಕ ಇವರಿಗೆ ನೆರವಾಗಬೇಕು. ಕ್ಷೇಮಾಭಿವೃದ್ಧಿ ನಿಧಿಗೆ ಹಣ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮನವಿ ಮಾಡಬೇಕು ಎಂದರು.

ಗೃಹಮಂಡಳಿಯಲ್ಲಿ ೬.೫೦೦- ೭,೦೦೦ ನಿವೇಶನಗಳಿವೆ. ಇದರಲ್ಲಿ ಶೇ ೫೦ ರಷ್ಟು ನಿವೇಶನವನ್ನು ಕ್ರೀಡಾಪಟುಗಳಿಗೆ ನೀಡಬೇಕು ಎಂಬ ನಿಯಮ ಇದೆ. ಉಳಿದ ನಿವೇಶನವನ್ನು ಪತ್ರಕರ್ತರಿಗೆ ನೀಡಬಹುದು. ಪತ್ರಕರ್ತರ ಪರವಾಗಿ ಮುಖ್ಯಮಂತ್ರಿ ಇದ್ದಾರೆ. ಮುಖ್ಯಮಂತ್ರಿ ತೀರ್ಮಾನ ಮಾಡಿದರೆ ನಿವೇಶನ ವಿತರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ ೧೦ ಲಕ್ಷ ರು. ನೀಡುವುದಾಗಿ ಈ ಹಿಂದೆ ಆಶ್ವಾಸನೆ ನೀಡಿದ್ದೆ. ಅದರಂತೆ ಜೂನ್ ಒಳಗೆ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸದ ಶ್ರೇಯಸ್ ಪಟೇಲ್, ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಭಾರತೀಯ ಕಾರ್ಯನಿರತ ಪರ್ತಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ. ಶಂಭುಲಿಂಗ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪತ್ರಿಕಾ ವಿತರಕರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು, ಜಿಲ್ಲೆಯ ೮ ಹಿರಿಯ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಜವರಪ್ಪ, ಲಕ್ಷ್ಮೀನರಸಪ್ಪ, ನಂದನ್ ಪುಟ್ಟಣ್ಣ, ಯಶಸ್ವಿನಿಗೆ ಕೆ. ವಿ. ಪ್ರಭಾಕರ್ ಸನ್ಮಾನಿಸಿದರು.

ಕಲಾತಂಡದೊಂದಿಗೆ ಮೆರವಣಿಗೆ:

ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಸಮ್ಮೇಳನದ ಅಂಗವಾಗಿ ಪಟ್ಟಣದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಿತು.

ಆಂಜನೇಯ ದೇಗುಲದ ಬಳಿ ಹೊಸ ಕೊಪ್ಪಲು ಶಕ್ತಿಮಠದ ಬಸವೇಶ್ವರ ಚೈತನ್ಯ ಸ್ವಾಮೀಜಿ, ನುಗ್ಗೇಹಳ್ಳಿಯ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ, ಶಾಸಕ ಸಿ.ಎನ್. ಬಾಲಕೃಷ್ಣ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕೋಲಾಟ, ಡೊಳ್ಳುಕುಣಿತ, ವೀರಗಾಸೆ, ತಮಟೆ ವಾದ್ಯದೊಂದಿಗೆ ಮೆರವಣಿಗೆ ಸಾಗಿತು.

ಜಿಲ್ಲೆಯ ಹಿರಿಯ ಪತ್ರಿಕಾ ವಿತರಕ ಶಾಂತಿಗ್ರಾಮದ ಪೂಚಣ್ಣ ಅವರ ಭಾವಚಿತ್ರವನ್ನು ವಾಹನದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು. ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಬಿಜೆಪಿ ಮುಖಂಡ ಎ.ಸಿ. ಆನಂದಕುಮಾರ್, ಡಾ. ರಮೇಶ್ ಬಾಬು, ಡಾ. ವಿ.ಮಹೇಶ್, ಪರಿಸರವಾದಿ ಸಿ.ಎನ್. ಅಶೋಕ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಲ್.ಪಿ. ಪ್ರಕಾಶಗೌಡ ಪಾಲ್ಗೊಂಡಿದ್ದರು.

ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ರುದ್ರಣ್ಣ ಹರ್ತಿಕೋಟೆ, ತುಮಕೂರಿನ ಹಿರಿಯ ಪತ್ರಕರ್ತ ಎಸ್. ನಾಗಣ್ಣ, ತಹಸೀಲ್ದಾರ್ ವಿ.ಎಸ್. ನವೀನ್‌ಕುಮಾರ್. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್. ಬಿ. ಮದನಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಎಸ್. ಕಿರಣ್, ರಾಜ್ಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ್, ಡಿವೈಎಸ್‌ಪಿ ಕುಮಾರ್, ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಶಾಂಕ್, ಪತ್ರಕರ್ತರಾದ ರವಿ ನಾಕಲಗೂಡು, ಬಾಳ್ಳು ಗೋಪಾಲ್, ವಿತರಕರ ಸಂಘದ ಕಾರ್ಯದರ್ಶಿ ಎಂ.ಎಂ. ಜಯರಾಂ ಇದ್ದರು.