ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಬಗ್ಗೆ ಮಂಗಳೂರಿನಲ್ಲಿಯೇ ಮೊದಲ ಸಭೆ ನಡೆಸಲಾಗಿದೆ. ಆದಷ್ಟು ಬೇಗ ಈ ಬಗ್ಗೆ ಒಳ್ಳೆಯ ಫಲಿತಾಂಶ ಕೊಡಲಾಗುವುದು. ಕರಾವಳಿಯಿಂದ ರಾಮೇಶ್ವರ, ಅಯೋಧ್ಯೆಗೆ ರೈಲು ಆರಂಭಿಸುವ ಸಹಿತ ಈ ಭಾಗದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಕರಾವಳಿಗೆ ನನ್ನ ಮೊದಲ ಆದ್ಯತೆಯಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಅವರು ಭಾನುವಾರ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಇಲ್ಲಿ ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ನವೀಕರಿಸಲಾದ ಕಾಮಗಾರಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಿಲ್ದಾಣದ ಅಭಿವೃದ್ಧಿಯ ದಾನಿಗಳ ಬೋರ್ಡುಗಳನ್ನು ತೆಗೆಯದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಂತೆ ರೈಲು ನಿಲ್ದಾಣಗಳು ಸಹ ಇರಬೇಕು ಎಂದಿದ್ದಾರೆ. ೧ ಲಕ್ಷ ಕಿ.ಮೀ. ರೈಲು ಮಾರ್ಗವಿದ್ದು, ಚೀನಾ ಬಿಟ್ಟರೆ ಭಾರತದಲ್ಲಿಯೇ ಇಷ್ಟು ದೊಡ್ಡ ರೈಲು ಜಾಲವಿದೆ. ರೈಲ್ವೆಯಲ್ಲಿ ೫೦-೬೫ ವರ್ಷಗಳಲ್ಲಿ ಆಗದ ಪ್ರಗತಿಯನ್ನು ಕೆಲವೇ ವರ್ಷಗಳಲ್ಲಿ ಸಾಧಿಸಲಾಗಿದೆ, ಇನ್ನಷ್ಟು ಸಾಧಿಸಲಾಗುವುದು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ರೈಲು ಹಳಿ ಡಬ್ಲಿಂಗ್, ಕರಾವಳಿಯ ಎಲ್ಲಾ ನಿಲ್ದಾಣಗಳ ಉನ್ನತೀಕರಣ ಆಗಬೇಕಿದೆ ಎಂದು ಮನವಿ ಮಾಡಿದರು. ಶಾಸಕ ಕಿರಣ್ ಕೊಡ್ಗಿ, ರಾಮೇಶ್ವರ, ಅಯೋಧ್ಯೆಗೆ ಕುಂದಾಪುರದಿಂದ ರೈಲು ಆರಂಭ ಮಾಡಲು ಕೋರಿದರು.ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೊಂಕಣ್ ರೈಲ್ವೆಯ ಅಧಿಕಾರಿಗಳಾದ ಸುನೀಲ್ ಗುಪ್ತಾ, ಆಶಾ ಶೆಟ್ಟಿ, ಲಯನ್ಸ್ ಕ್ಲಬ್‌ನ ರೋವನ್ ಡಿಕೋಸ್ಟಾ, ಸಂದೀಪ್ ಶೆಟ್ಟಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು. ಕೊಂಕಣ್ ರೈಲ್ವೆಯ ಎಂಜಿನಿಯರ್ ಲಿಖಿತಾ ಕಾರ್ಯಕ್ರಮ ನಿರೂಪಿಸಿದರು.