ಸಾರಾಂಶ
ಗೃಹರಕ್ಷಕ ದಳದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪೊಲೀಸ್ ಇಲಾಖೆ ಬಗ್ಗೆ ಹೆಮ್ಮೆ ಮತ್ತು ಜನ ಸೇವೆ ಮಾಡುವ ಹಂಬಲ ಇರುವವರಿಗೆ ಗೃಹರಕ್ಷಕ ದಳ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.
ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಗೃಹರಕ್ಷಕ ದಳದಿಂದ ಏರ್ಪಡಿಸಿದ್ದ ಶಿಬಿರಾರ್ಥಿಗಳ ಮೊದಲ ವರ್ಷದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪೊಲೀಸರಿಗೆ ಬೆಂಬಲವಾಗಿ ಸಮಾಜ ಘಾತುಕ ಚಟುವಟಿಕೆ ನಿಗ್ರಹಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದ ಕಾರ್ಯ ಮಹತ್ವದ್ದು. ಶಿಬಿರಾರ್ಥಿಗಳು 10 ದಿನಗಳಿಂದ ಬುನಾದಿ ತರಬೇತಿ ಪಡೆದಿದ್ದು ಪೊಲೀಸರಂತೆ ಸಮವಸ್ತ್ರ ಧರಿಸಿದ ಬಳಿಕ ಶಿಸ್ತು ಮತ್ತು ನಡವಳಿಕೆಯಲ್ಲಿ ಬದಲಾವಣೆ ತಂದುಕೊಂಡಿದ್ದು ಜವಾಬ್ದಾರಿ ಹೆಚ್ಚಲಿದೆ ಎಂದರು.ಬಂದೋಬಸ್ತ್, ದತ್ತ ಜಯಂತಿ, ಚುನಾವಣೆ, ಗಣ್ಯ ವ್ಯಕ್ತಿಗಳ ಭೇಟಿ ಸಂದರ್ಭದಲ್ಲಿ ಪೊಲೀಸರಿಗೆ ಶಕ್ತಿಯಾಗಿ ನಿಲ್ಲಬೇಕು. ಕಲಿಕೆ ನಿರಂತರವಾಗಿದ್ದು ತರಬೇತಿಯಲ್ಲಿ ಕಲಿತಿರುವುದನ್ನು ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲೆಯಲ್ಲಿ 631 ಗೃಹರಕ್ಷಕ ದಳದ ಸಿಬ್ಬಂದಿ ಇದ್ದು, ಖಾಲಿ ಹುದ್ದೆಗಳ ಭರ್ತಿಗೆ ಹೆಚ್ಚಿನ ಅರ್ಜಿಗಳೆ ಇರಲಿಲ್ಲ ನಿರಾಸಕ್ತಿ ಇರಬಹುದು. ಗೃಹರಕ್ಷಕ ದಳದ ಸಿಬ್ಬಂದಿ ಕರ್ತವ್ಯದ ದಿನಗಳಲ್ಲಿ ಪ್ರತಿ ದಿನದ ಸೇವಾ ಕಾರ್ಯಕ್ಕೆ 800 ರು. ಸಂಭಾವನೆ ಸಿಗಲಿದೆ. ಕಾನೂನು ಸುವ್ಯವಸ್ಥೆ ಪಾಲನೆ ಜತೆಗೆ ಜನಸೇವೆಗೆ ಸದಾ ಸಿದ್ಧರಾಗುವಂತೆ ತಿಳಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಜಿ. ಕೃಷ್ಣಮೂರ್ತಿ ಮಾತನಾಡಿ, 112 ಶಿಬಿರಾರ್ಥಿಗಳಿಗೆ ಇದೇ 5 ರಿಂದ 14 ರವರೆಗೆ 10 ದಿನಗಳ ಕಾಲ ಬುನಾದಿ ತರಬೇತಿ ನೀಡಲಾಗಿದೆ. ಈ ವೇಳೆ ಅಗ್ನಿಶಮನ, ಪ್ರವಾಹ ನಿಯಂತ್ರಣ, ಚುನಾವಣಾ ಕರ್ತವ್ಯ, ಶ್ರಮದಾನ, ಪೊಲೀಸರೊಂದಿಗೆ ನಡವಳಿಕೆ, ಲಾಠಿ, ಬಂದೂಕು ತರಬೇತಿ ಸೇರಿದಂತೆ ಹಲವು ವಿಷಯಗಳ ಕುರಿತು ತಿಳಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 631 ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದು ಈ ಪೈಕಿ 490 ಪುರುಷ ಹಾಗೂ 135 ಮಹಿಳಾ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದರು. ತರಬೇತಿ ಪಡೆದ ಶಿಬಿರಾರ್ಥಿಗಳಾದ ಶೃಂಗೇರಿ ಘಟಕದ ಆಶಾ, ಮೂಡಿಗೆರೆ ರೋಹಿತ್ ಶಿಬಿರದ ಅನುಭವ ಹಂಚಿಕೊಂಡರು.ಈ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಿದರು. ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಸಹಾಯಕ ಬೋಧಕ ಕರಿಬಸಪ್ಪ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ನಾರಾಯಣ ಪೂಜಾರ್ ಹಾಜರಿದ್ದರು.
15 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಗೃಹರಕ್ಷಕ ದಳದಿಂದ ಏರ್ಪಡಿಸಿದ್ದ ಶಿಬಿರಾರ್ಥಿಗಳ ಮೊದಲ ವರ್ಷದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.