ಒಳ್ಳೆಯ ಜನರು ರಾಜಕಾರಣಕ್ಕೆ ಬರಬೇಕು: ಬಸವರಾಜ ಹೊರಟ್ಟಿ

| Published : Nov 16 2024, 12:32 AM IST

ಒಳ್ಳೆಯ ಜನರು ರಾಜಕಾರಣಕ್ಕೆ ಬರಬೇಕು: ಬಸವರಾಜ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಕ್ಷೇತ್ರಗಳಂತೆಯೇ ರಾಜಕಾರಣದಲ್ಲೂ ಗುಣಮಟ್ಟ ಕುಸಿದಿದೆ. ಹಣ ಕೊಟ್ಟು ಮತ ಕೇಳುವವರು ಹಾಗೂ ಹಣ ಪಡೆದು ಮತ ಹಾಕುವವರು ಇರುವವರೆಗೂ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆಯೇ?, ಪ್ರತಿ ಪಕ್ಷದಲ್ಲೂ ಜಾತಿ ನೋಡುತ್ತಾರೆ. ಟಿಕೆಟ್ ಕೊಡುವಾಗ ಹಣವೆಷ್ಟಿದೆ? ಎಷ್ಟು ಕೋಟಿ ಖರ್ಚು ಮಾಡಬಲ್ಲ? ಎಂಬುದನ್ನೇ ಪ್ರಮುಖವಾಗಿ ಗಮನಿಸುವುದು ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜಕಾರಣ ಹಾಳಾಗಿದೆ ಎಂದು ಎಲ್ಲರೂ ದೂರ ಹೋದರೆ ಮುಂದೇನು?, ಹೀಗಾಗಿ, ಒಳ್ಳೆಯ ಜನರು ರಾಜಕಾರಣಕ್ಕೆ ಬರಬೇಕು. ಶಾಸನ ಸಭೆಗಳನ್ನು ಪ್ರವೇಶಿಸಬೇಕು ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಎಸ್. ಹೊರಟ್ಟಿ ಕರೆ ನೀಡಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಇತಿಹಾಸ, ರಾಜ್ಯಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗ, ಐಕ್ಯೂಎಸಿ ಮತ್ತು ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಪತ್ರಾಗಾರ ಕಚೇರಿ ಸಹಯೋಗದಲ್ಲಿ ಆಯೋಜಿಸಿರುವ ಮೈಸೂರು ಪ್ರಜಾಪ್ರತಿನಿಧಿ ಸಭೆ: ಚಾರಿತ್ರಿಕ ಅವಲೋಕನ ಕುರಿತ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರಸಂಕಿರಣವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಒಳ್ಳೆಯದೂ ಆಗುತ್ತಿದೆ. ಕೆಟ್ಟದ್ದೂ ಆಗುತ್ತಿದೆ. ಪ್ರಜ್ಞಾವಂತರು, ಯುವಜನರು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯಬಾರದು. ಸರ್ಕಾರಿ ನೌಕರಿ ಪಡೆದುಕೊಂಡರೆ ಸಾಕೆಂದು ಭಾವಿಸದೇ ಅಥವಾ ಕೆಲಸಕ್ಕಷ್ಟೆ ಸೀಮಿತವಾಗಬಾರದು. ರಾಜಕಾರಣಕ್ಕೂ ಬರಬೇಕು ಎಂದರು.

ಎಲ್ಲಾ ಕ್ಷೇತ್ರಗಳಂತೆಯೇ ರಾಜಕಾರಣದಲ್ಲೂ ಗುಣಮಟ್ಟ ಕುಸಿದಿದೆ. ಹಣ ಕೊಟ್ಟು ಮತ ಕೇಳುವವರು ಹಾಗೂ ಹಣ ಪಡೆದು ಮತ ಹಾಕುವವರು ಇರುವವರೆಗೂ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆಯೇ?, ಪ್ರತಿ ಪಕ್ಷದಲ್ಲೂ ಜಾತಿ ನೋಡುತ್ತಾರೆ. ಟಿಕೆಟ್ ಕೊಡುವಾಗ ಹಣವೆಷ್ಟಿದೆ? ಎಷ್ಟು ಕೋಟಿ ಖರ್ಚು ಮಾಡಬಲ್ಲ? ಎಂಬುದನ್ನೇ ಪ್ರಮುಖವಾಗಿ ಗಮನಿಸುವುದು ನಡೆಯುತ್ತಿದೆ ಎಂದು ವಿಷಾದಿಸಿದರು.

ಮೈಸೂರು ಮಹಾರಾಜರು ವೈಶಿಷ್ಟ್ಯ ಮೆರೆದು ಪ್ರಜಾಪ್ರತಿನಿಧಿ ಸಭೆಯನ್ನು ಆರಂಭಿಸಿದರು. ಜನರ ಅಹವಾಲುಗಳನ್ನು ಕೇಳುವ ಕೆಲಸ ಮಾಡಿದರು. ವಿಧಾನಪರಿಷತ್ತು ಪರಿಕಲ್ಪನೆ ಹುಟ್ಟಿದ್ದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾರಣದಿಂದ ಎಂದು ಅವರು ಸ್ಮರಿಸಿದರು.

ವಿದ್ಯಾರ್ಥಿಗಳು ಗುರು, ಹಿರಿಯರನ್ನು ಗೌರವಿಸಬೇಕು. ಶಿಸ್ತಿಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಸ್ತೆಂಬ ಎಣ್ಣೆ ಇಲ್ಲದಿದ್ದರೆ ಜೀವನದ ಹಣತೆ ಬೆಳಗುವುದಿಲ್ಲ ಎಂಬುದನ್ನು ಮರೆಯಬಾರದು ಎಂದರು.

ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ ಮಾತನಾಡಿ, ಮೈಸೂರು ಸರ್ಕಾರದ ಆಡಳಿತದ 39 ಇಲಾಖೆಗಳ 2 ಲಕ್ಷಕ್ಕೂ ಹೆಚ್ಚು ಮೂಲ ದಾಖಲೆ ಸಂರಕ್ಷಿಸಿ ಅಧ್ಯಯನಶೀಲರಿಗೆ ಒದಗಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ. ಲಭ್ಯ ದಾಖಲೆಗಳ ಡಿಜಿಟಲೀಕರಣ ನಡೆಯುತ್ತಿದೆ. ಸದ್ಯ 1.08 ಕೋಟಿ ಪುಟಗಳಷ್ಟು ಮಾಹಿತಿ ಇಲಾಖೆಯ ಜಾಲತಾಣದಲ್ಲಿ ಲಭ್ಯವಿದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಂ. ಪ್ರಭು ಇದ್ದರು.ವಿಧಾನ ಮಂಡಲ ಅಧಿವೇಶನದಲ್ಲಿ ಬಹಳಷ್ಟು ಶಾಸಕರು, ವಿಧಾನ ಪರಿಷತ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ. ಪ್ರಶ್ನೆ ಕೇಳುತ್ತಾರೆ, ಉತ್ತರ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಚರ್ಚೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವುದಿಲ್ಲ. ಇದರಿಂದ ಬಹಳ ನೋವಾಗುತ್ತದೆ.

- ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನಪರಿಷತ್ತು

ಪ್ರಬಂಧಗಳ ಮಂಡನೆ

ಮೈಸೂರು ಪ್ರಜಾಪ್ರತಿನಿಧಿ ಸಭೆ, ಉಗಮ ಮತ್ತು ಬೆಳೆವಣೆಗೆ ಕುರಿತು ಡಾ.ಮಹಾದೇವ ಸ್ವಾಮಿ, ಪ್ರಜಾಪ್ರಭುತ್ವದ ಹಿನ್ನೆಲೆ ಕುರಿತು ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಹಾಗೂ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಆಯ್ಕೆ ಹಿನ್ನೆಲೆ ಕುರಿಯು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರಬಂಧ ಮಂಡಿಸಿದರು.