ಸಾರಾಂಶ
ಮೊರಾರ್ಜಿ ವಸತಿ ಶಾಲೆಯಲ್ಲಿ 2021-2022ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿ ಬೇರೆಡೆ ಪಿಯು ಶಿಕ್ಷಣ ಪಡೆದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ 2021-2022ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿ ಬೇರೆಡೆ ಪಿಯು ಶಿಕ್ಷಣ ಪಡೆದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ತಾಲೂಕಿನ ರಾಜವಾಳ ತಾಂಡಾದ ಬಡ ಕುಟುಂಬದ ಪ್ರವೀಣಕುಮಾರ ಕಾಶಿರಾಮ್ ರಾಠೋಡ ಹಾಗೂ ಏದಲಬಾವಿ ತಾಂಡಾದ ಚಂದ್ರಕಾಂತ ಜಾಧವ 6 ರಿಂದ 10ನೇ ತರಗತಿವರೆಗೆ ಹುಣಸಗಿ ಪಟ್ಟಣದ ಮೊರಾರ್ಜಿ ಶಾಲೆಯಲ್ಲಿ ವ್ಯಾಸಾಂಗ ಮಾಡಿ, 2021-2022ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದರು. ಪ್ರವೀಣಕುಮಾರ ರಾಠೋಡ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸ್‌ಫರ್ಡ್ ಪಾಟೀಲ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ನಂತರ ನೀಟ್ ಪರೀಕ್ಷೆಯಲ್ಲಿ 720ಕ್ಕೆ 620 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾನೆ.
ಇನ್ನೋರ್ವ ವಿದ್ಯಾರ್ಥಿ ಚಂದ್ರಕಾಂತ ಜಾಧವ ಪಿಯುಸಿ ಶಿಕ್ಷಣನ್ನು ಭಾಗ್ಯವಂತಿ ವಿಜ್ಞಾನ ಕಾಲೇಜು ತಾಳಿಕೋಟಿಯಲ್ಲಿ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ನೀಟ್ ಪರೀಕ್ಷೆಯಲ್ಲಿ 720ಕ್ಕೆ 498 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಈ ವಿದ್ಯಾರ್ಥಿಗಳ ಸಾಧನೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಅಶೋಕ ನೀಲಗಾರ ಮತ್ತು ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.