ಸಣ್ಣ ಪುಟ್ಟ ಹಳ್ಳಿಗಳಿಗೂ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ: ಚಲುವರಾಯಸ್ವಾಮಿ

| Published : Apr 01 2025, 12:47 AM IST

ಸಣ್ಣ ಪುಟ್ಟ ಹಳ್ಳಿಗಳಿಗೂ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಹಕ್ಕುಪತ್ರ ನೀಡಲು ಯಾವುದೇ ತೊಂದರೆಯಿಲ್ಲ. ಆದರೆ, ಇದು ಸರ್ಕಾರಿ ಜಾಗವಾಗಿರುವುದರಿಂದ ತಹಸೀಲ್ದಾರ್ ಹಾಗೂ ತಾಪಂ ಇಒ ಸಭೆ ನಡೆಸಿ ಕಾನೂನು ರೀತಿಯಲ್ಲಿ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಪ್ರದೇಶದ ಜನರು ರಸ್ತೆ, ಚರಂಡಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯಗಳಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸಣ್ಣ ಪುಟ್ಟ ಹಳ್ಳಿಗಳಿಗೂ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಗಡಿ ಗ್ರಾಮ ಚಂದ್ರಶೇಖರಪುರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ೨ ಕೋಟಿ ರು. ವೆಚ್ಚದಲ್ಲಿ ಕಾಂಕ್ರಿಟ್ ಮತ್ತು ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕೇವಲ 30 ಮನೆಗಳಿರುವ ಚಂದ್ರಶೇಖರಪುರ ಎಂಬ ಕುಗ್ರಾಮಕ್ಕೆ ಕಳೆದ 65 ವರ್ಷಗಳಿಂದಲೂ ರಸ್ತೆ ನಿರ್ಮಾಣವಾಗದಿರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಚುನಾವಣೆ ವೇಳೆ ತಾವು ನೀಡಿದ್ದ ಭರವಸೆಯಂತೆ ಗ್ರಾಮ ಪರಿಮಿತಿಯಲ್ಲಿ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು 1 ಕೋಟಿ ರು.ವೆಚ್ಚದ ಕಾಂಕ್ರಿಟ್ ರಸ್ತೆ ಹಾಗೂ ಗ್ರಾಮದಲ್ಲಿ ಡಾಂಬರು ರಸ್ತೆ ನಿರ್ಮಿಸಲಾಗುತ್ತಿದೆ. ಇನ್ನುಳಿದ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಜನರ ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಗ್ರಾಮದಲ್ಲಿ ಕೇವಲ 25 ರಿಂದ 30 ಮನೆಗಳಿದ್ದರೂ ಕೂಡ ಮೂರು ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಊರಿನ ಮಕ್ಕಳೂ ಸಹ ಮದ್ಯಸೇವನೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಶಾಂತಿ, ನೆಮ್ಮದಿ ಹಾಳಾಗುತ್ತಿದೆ. ದಯಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಮಹಿಳೆಯರು ಮನವಿ ಮಾಡಿದರು.

ಕಳೆದ ಮೂರ್‍ನಾಲ್ಕು ದಶಕಗಳ ಹಿಂದೆ ಸರ್ಕಾರದ ಜಾಗದಲ್ಲಿ ನಾವು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಆದರೆ, ಈವರೆಗೂ ನಮಗೆ ಹಕ್ಕು ಪತ್ರ ನೀಡಿಲ್ಲ. ದಯಮಾಡಿ ನಮಗೆ ಹಕ್ಕುಪತ್ರ ಕೊಡಿಸಿಕೊಡಿ ಎಂದು ಸಚಿವರಲ್ಲಿ ಮನವಿಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಸಚಿವರು ಅಬಕಾರಿ ಅಧಿಕಾರಿಗಳ ಜೊತೆಗೂಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಕ್ಷಣ ನಿಲ್ಲಿಸಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ಗೆ ಸೂಚಿಸಿದರು.

ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಹಕ್ಕುಪತ್ರ ನೀಡಲು ಯಾವುದೇ ತೊಂದರೆಯಿಲ್ಲ. ಆದರೆ, ಇದು ಸರ್ಕಾರಿ ಜಾಗವಾಗಿರುವುದರಿಂದ ತಹಸೀಲ್ದಾರ್ ಹಾಗೂ ತಾಪಂ ಇಒ ಸಭೆ ನಡೆಸಿ ಕಾನೂನು ರೀತಿಯಲ್ಲಿ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿಯ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಿನೇಶ್, ಕೆಆರ್‌ಡಿಎಲ್‌ನ ಎಇಇ ಚೈತ್ರ, ಪುರಸಭೆ ನಾಮನಿರ್ದೇಶಿತ ಸದಸ್ಯ ನರಸಿಂಹ ಮುಖಂಡರಾದ ನೆಲ್ಲಿಗೆರೆ ಚೇತನ್, ಶಿವಣ್ಣ, ಸುರೇಶ್, ರಮೇಶ, ಐಯ್ಯಪ್ಪ, ಶ್ರೀನಿವಾಸ್, ದಿನೇಶ್ ಸೇರಿದಂತೆ ಹಲವರು ಇದ್ದರು.