ಸಾರಾಂಶ
ಭಟ್ಕಳ ತಾಲೂಕಿನಲ್ಲಿ ಗುರುವಾರ ಮಳೆಯ ಆರ್ಭಟ ಕಡಿಮೆಯಾಗಿದೆ. ತಾಲೂಕಿನಲ್ಲಿ ಗುರುವಾರ ಬೆಳಿಗ್ಗೆವರೆಗೆ 56 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಭಟ್ಕಳ: ತಾಲೂಕಿನಲ್ಲಿ ಗುರುವಾರ ಮಳೆಯ ಆರ್ಭಟ ಕಡಿಮೆಯಾಗಿದೆ. ತಾಲೂಕಿನಲ್ಲಿ ಗುರುವಾರ ಬೆಳಿಗ್ಗೆವರೆಗೆ 56 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಮಳೆ ಎಡಬಿಡದೆ ಸುರಿಯದೇ ಇದ್ದರೂ ಆಗಾಗ ಸುರಿದು ಹೋಗುತ್ತಿದೆ. ಮೂರು ದಿನಗಳ ಕಾಲ ವ್ಯಾಪಕವಾಗಿ ಸುರಿದ ಮಳೆಗೆ ಬಾವಿ, ಹೊಳೆ, ಕೆರೆ ತುಂಬಿದೆ. ಬಿಸಿಲ ತಾಪಮಾನದಿಂದ ಅಂತರ್ಜಲ ಮಟ್ಟ ಕಡಿಮೆಯಾಗಿತ್ತು. ಕೆಲವು ಕಡೆ ಕುಡಿಯುವ ನೀರಿಗೆ ಹಾಹಾಕಾರದ ಪರಿಸ್ಥಿತಿ ಉಂಟಾಗಿತ್ತು. ಬಾವಿ, ಹೊಳೆ, ಕೆರೆಯಲ್ಲಿ ನೀರಿನ ಹರಿವು ಕಡಿಮೆಯಾದ್ದರಿಂದ ತೋಟ ನೀರು ಕಾಣದೇ ಒಣಗುವ ಹಂತದಲ್ಲಿತ್ತು. ಆದರೆ ಮೂರು ದಿನಗಳ ಸುರಿದ ಭಾರೀ ಮಳೆ ಎಲ್ಲದಕ್ಕೂ ಅನುಕೂಲ ಮಾಡಿಕೊಟ್ಟಿದೆ. ತಾಲೂಕಿನಲ್ಲಿ ಮೂರು ದಿನಗಳಲ್ಲಿ 240 ಮಿ.ಮೀ.ನಷ್ಟು ಮಳೆ ಸುರಿದಿದೆ. ಇದರಿಂದ ಎಲ್ಲೆಲ್ಲೂ ನೀರೇ ನೀರು ಎನ್ನುವಂತಾಗಿತ್ತು. ಸದ್ಯ ಬಾವಿ, ಕೆರೆ ತುಂಬಿದ್ದರಿಂದ ನೀರಿನ ತುಟಾಗ್ರತೆ ಕಡಿಮೆಯಾಗಿದೆ.ಉತ್ತಮವಾಗಿ ಮಳೆ ಸುರಿದಿದ್ದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬಿತ್ತನೆ ಬೀಜದ ವಿತರಣೆ ಎಲ್ಲೆಡೆ ನಡೆಯುತ್ತಿದೆ. ಪಟ್ಟಣದಲ್ಲಿ ಗಟಾರದ ಸ್ವಚ್ಛತಾ ಕಾರ್ಯ ಅಲ್ಲಲ್ಲಿ ಆರಂಭವಾಗಿದ್ದರೂ ಗ್ರಾಮಾಂತರ ಭಾಗದಲ್ಲಿ ಎಲ್ಲಿಯೂ ಗಟಾರ ಸ್ವಚ್ಛತಾ ಕಾರ್ಯ ಆರಂಭಿಸಿದಂತಿಲ್ಲ. ಪ್ರಥಮ ಮಳೆಗೆ ರಸ್ತೆ ಮೇಲೆ ತ್ಯಾಜ್ಯ, ಕಸಕಡ್ಡಿ ಬಂದು ಬಿದ್ದಿದ್ದು, ವಾಹನ ಸವಾರರು ಚಾಲನೆಯಲ್ಲಿ ಸ್ವಲ್ಪ ಎಡವಿದರೂ ಬೀಳುವುದು ಖಚಿತ. ಕೆಲವು ಕಡೆ ಗಟಾರದ ಸನಿಹ ಇರುವ ಮನೆಯವರೇ ಗಟಾರ ಸ್ವಚ್ಛತೆ ಮಾಡುತ್ತಿರುವುದು ಕಂಡು ಬಂದಿದೆ.
ಗ್ರಾಮಾಂತರ ಭಾಗದಲ್ಲಿ ಇನ್ನಾದರೂ ಗಟಾರ ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯ ಆಡಳಿತ ಅಥವಾ ರಸ್ತೆ ನಿರ್ವಹಣೆ ಮಾಡುತ್ತಿರುವ ಇಲಾಖೆಗಳು ಮಾಡಬೇಕಿದೆ ಎನ್ನುವ ಆಗ್ರಹ ಕೇಳಿ ಬಂದಿದೆ. ಮಳೆಗಾಲ ಆರಂಭಗೊಂಡಿದ್ದರಿಂದ ಮಳೆಗಾಲದ ಪೂರ್ವ ಸಿದ್ಧತಾ ಕಾರ್ಯದಲ್ಲಿ ಜನರು ತೊಡಗಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಪಟ್ಟಣದ ರಂಗಿನಕಟ್ಟೆಯ ಹೆದ್ದಾರಿ ಮಳೆನೀರು ನಿಂತು ಹೊಳೆಯಾಗುತ್ತಿತ್ತು. ಆದರೆ ಈ ಬಾರಿ ಐಆರ್‌ಬಿ ಅವರು ರಂಗಿಕಟ್ಟೆಯಲ್ಲಿ ನೀರು ಹರಿದು ಹೋಗಲು ಪೈಪ್ ಹಾಕಿ ವ್ಯವಸ್ಥೆ ಮಾಡಿದ್ದರಿಂದ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಬಿದ್ದರೂ ರಂಗಿನಕಟ್ಟೆ ಹೆದ್ದಾರಿಯಲ್ಲಿ ಮಳೆ ನೀರು ನಿಂತಿಲ್ಲ.