ತೀವ್ರ ಮಳೆ ಕೊರತೆಯಿಂದ ಹಿಂಗಾರು ಬಿತ್ತನೆ ಮಾಡಲಾಗದೇ ಕಂಗಾಲಾಗಿದ್ದ ಜಿಲ್ಲೆಯ ರೈತರಿಗೆ ಶುಕ್ರವಾರ ಉತ್ತಮ ಮಳೆಯಾಗುವ ಮೂಲಕ ಶುಭವಾಗಿದೆ.

ಧಾರವಾಡ:

ತೀವ್ರ ಮಳೆ ಕೊರತೆಯಿಂದ ಹಿಂಗಾರು ಬಿತ್ತನೆ ಮಾಡಲಾಗದೇ ಕಂಗಾಲಾಗಿದ್ದ ಜಿಲ್ಲೆಯ ರೈತರಿಗೆ ಶುಕ್ರವಾರ ಉತ್ತಮ ಮಳೆಯಾಗುವ ಮೂಲಕ ಶುಭವಾಗಿದೆ. ಜಿಲ್ಲಾದ್ಯಂತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದು, ಹಿಂಗಾರು ಬಿತ್ತನೆ ಕೈಗೊಳ್ಳಲು ರೈತರು ಉತ್ಸುಕರಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ವರೆಗೂ ಮಳೆ ನಿರೀಕ್ಷೆಯೇ ಇರಲಿಲ್ಲ. ಮಧ್ಯಾಹ್ನದ ನಂತರ ಮೋಡ ಮುಸುಕಿ ಏಕಾಏಕಿ ಧಾರಾಕಾರ ಮಳೆ ಸುರಿಯಿತು. ಅಳ್ನಾವರ, ಧಾರವಾಡ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಸೇರಿದಂತೆ ಇಡೀ ಜಿಲ್ಲಾದ್ಯಂತ ಎರಡು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.

ಮಳೆ ಕೊರತೆಯಿಂದಲೇ ಮುಂಗಾರು ಬೆಳೆ ಕಳೆದುಕೊಂಡಿದ್ದ ಜಿಲ್ಲೆಯ ರೈತರು, ಹಿಂಗಾರು ಬೆಳೆಯ ಮೇಲೆ ತೀವ್ರ ನಿರೀಕ್ಷೆ ಇಟ್ಟಿದ್ದರು. ಅದಕ್ಕೆ ಪೂರಕವಾಗಿ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಹೊಲವನ್ನು ಹದಗೊಳಿಸಿದ್ದರು. ಸಾಮಾನ್ಯವಾಗಿ ಹಿಂಗಾರಿಗೆ ಬಿತ್ತನೆ ಸಮಯದಲ್ಲಿ ಒಂದೆರೆಡು ಮಳೆಯಾದರೆ ಸಾಕು. ಹವಾಮಾನದ ಮೇಲೆಯೇ ಬೆಳೆಗಳು ಬರುತ್ತವೆ. ಆದರೆ, ಈ ಬಾರಿ ಬಿತ್ತನೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಶೇ.59ರಷ್ಟು ಮಳೆ ಕೊರತೆ ಉಂಟಾಗಿತ್ತು. ಜೊತೆಗೆ ವಿಪರೀತ ಬಿಸಿಲಿನ ವಾತಾವರಣದಿಂದ ಹೊಲಗಳು ಸಹ ಒಣಗಿದ್ದವು. ನಿರೀಕ್ಷಿತ ಮಳೆಯಾಗದ ಕಾರಣ ಈವರೆಗೂ ನೀರಾವರಿ ಹೊಂದಿದ್ದ ರೈತರಿಂದ ಜಿಲ್ಲೆಯಲ್ಲಿ ಶೇ.20ರಷ್ಟು ಮಾತ್ರ ಬಿತ್ತನೆ ಆಗಿತ್ತು. ಇದೀಗ ಬಿತ್ತನೆಗೆ ಪೂರಕವಾಗಿ ಉತ್ತಮ ಮಳೆಯಾಗಿದ್ದು ರೈತರು ಖುಷಿಯಾಗಿದ್ದಾರೆ. ಇದರೊಂದಿಗೆ ತೀವ್ರ ಬಿಸಿಲಿ ಕಾವಿಗೆ ಕಂಗಾಲಾಗಿದ್ದ ನಗರದ ಜನತೆಗೂ ಈ ಮಳೆಯು ತಂಪಿನ ಅನುಭವ ನೀಡಿತು. ಜೋರಾದ ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೂ ಸೃಷ್ಟಿಯಾಯಿತು. ಪ್ರತಿ ಬಾರಿಯಂತೆ ಈ ಮಳೆಗೂ ಟೋಲನಾಕಾ ಹಾಗೂ ಬಿಆರ್‌ಟಿಎಸ್‌ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯದೇ ಎರಡ್ಮೂರು ಅಡಿ ಎತ್ತರ ಮಳೆ ನಿಂತು ವಾಹನ ಸವಾರರಿಗೆ ತೊಂದರೆಯಾಯಿತು. ನಗರದ ಮಾರುಕಟ್ಟೆ ಹಾಗೂ ಇತರೆ ಪ್ರದೇಶದಲ್ಲಿ ಗಟಾರುಗಳು ಕಸದಿಂದ ತುಂಬಿದ್ದು ರಸ್ತೆ ಮೇಲೆಯೇ ನೀರು ಹರಿದು ವ್ಯಾಪಾರಸ್ಥರು ಹಾಗೂ ವಾಹನ ಸವಾರರಿಗೆ ಪರದಾಡಬೇಕಾಯಿತು.

ರೈತರಲ್ಲಿ ಭರವಸೆ ಮೂಡಿಸಿದ ಮಳೆ

ಹುಬ್ಬಳ್ಳಿ:

ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ನೆಲದಲ್ಲಿ ತೇವಾಂಶ ಹೆಚ್ಚಿ ಕೃಷಿ ಚಟುವಟಿಕೆಗಳಿಗೆ ಇಂಬು ನೀಡಿದಂತಾಗಿದೆ. ಹುಬ್ಬಳ್ಳಿ ಮಹಾನಗರದಲ್ಲಿ ಎರಡೂವರೆ ತಾಸಿಗೂ ಹೆಚ್ಚು ಸಮಯ ಸುರಿದ ಭಾರಿ ಮಳೆಯು ಅವಾಂತರ ಸೃಷ್ಟಿಸಿದೆ.ಬೆಳಗ್ಗೆಯಿಂದ ಕಂಡು ಬಂದ ಮೋಡ ಕವಿದ ವಾತಾವರಣ ಸಂಜೆ ಮಳೆ ಸುರಿಯುವ ಲಕ್ಷಣಗಳನ್ನು ಗೋಚರಿಸಿತ್ತು. ಹುಬ್ಬಳ್ಳಿ ಮಹಾನಗರದಲ್ಲಿ ಮೂರು ತಾಸಿಗೂ ಅಧಿಕ ಕಾಲ ಸುರಿದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದಾಜೀಬಾನ ಪೇಟೆಯ ತುಳಜಾಭವಾನಿ ಸರ್ಕಲ್‌, ಸಂಗೊಳ್ಳಿ ರಾಯಣ್ಣ ಸರ್ಕಲ್‌ ಬಳಿಯ ವಾಣಿಜ್ಯ ಸಂಕೀರ್ಣ ಸೇರಿದಂತೆ ಹಲವೆಡೆ ಬಹುಮಡಿ ಕಟ್ಟಡಗಳ ನೆಲಮಹಡಿಯಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡು ಜನರು ತಾಪತ್ರಯ ಅನುಭವಿಸುವಂತಾಯಿತು. ಫ್ಲೈಓವರ್‌ ಕಾಮಗಾರಿ ಪರಿಣಾಮ ರಸ್ತೆ ಅಗೆದಿದ್ದರಿಂದ ಸಂಗೊಳ್ಳಿರಾಯಣ್ಣ ಸರ್ಕಲ್‌ ಬಳಿಯ ಆಸ್ಪತ್ರೆ ಮತ್ತು ಪಕ್ಕದ ಬಿಲ್ಡಿಂಗ್‌ನ ಕೆಳಗಡೆ ಸಿಕ್ಕಾಪಟ್ಟೆ ನೀರು ನುಗ್ಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರು ಹೊರತೆಗೆದು ಸುರಕ್ಷತಾ ಕ್ರಮಕೈಗೊಂಡಿದ್ದರಿಂದ ಕಟ್ಟಡದಲ್ಲಿನ ಜನರು, ರೋಗಿಗಳು ಹಾಗೂ ಸುತ್ತಲಿನ ಬಿಲ್ಡಿಂಗ್‌ನ ಜನರು ನಿಟ್ಟುಸಿರು ಬಿಟ್ಟರು. ಉಣಕಲ್ಲ ಬಳಿಯ ಬಿಆರ್‌ಟಿಎಸ್‌ ಕಾರಿಡಾರ್‌ದಲ್ಲಿ ಭಾರೀ ಪ್ರಮಾಣದ ಮಳೆ ನೀರು ಶೇಖರಣೆಗೊಂಡಿತ್ತು. ಇದರಿಂದ ಕೆಲ ಕಾಲ ಚಿಗರಿ ಬಸ್‌ ಸಂಚಾರ ಕೊಂಚ ಅಸ್ತವಸ್ತವಾಗಿತ್ತು. ತುಳಜಾ ಭವಾನಿ ಸರ್ಕಲ್‌ನಲ್ಲಿ ಅಪಾರ ನೀರು ಸೇರಿದ್ದಂತೆ ಅಂಗಡಿಗಳಿಗೆ ನೀರು ನುಗ್ಗಿದ್ದರ ಬಗ್ಗೆ ಪಾಲಿಕೆಯ ಕಂಟ್ರೋಲ್‌ ರೂಂ ಗೆ ದೂರುಗಳು ಬಂದಿದ್ದವು.