ಉಡುಪಿ ಜಿಲ್ಲಾದ್ಯಂತ ಉತ್ತಮ ಮಳೆ: 10 ಮನೆಗಳಿಗೆ ಹಾನಿ

| Published : May 23 2025, 12:24 AM IST

ಸಾರಾಂಶ

ಬುಧವಾರ ರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ, ಗುರುವಾರ ಹಗಲಿನಲ್ಲಿ ಬಿಸಿಲು ಕಾಣಿಸಿಕೊಂಡಿತಾದರೂ, ಸಂಜೆಯಾಗುತ್ತಲೇ ಭಾರೀ ಗಾಳಿ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಅರಬ್ಬಿ ಸಮುದ್ರದಲ್ಲಿ ತೂಫಾನಿನ ಕಾರಣದಿಂದ ನಿರಂತರ ಮೂರನೇ ದಿನ ಗುರುವಾರವೂ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 23.70 ಮಿಮೀ ಮಳೆಯಾಗಿದೆ. ಗಾಳಿ, ಮಳೆಯಿಂದ 10 ಮನೆಗಳಿಗೆ, 1 ಶಾಲೆಗೆ 3 ತೋಟಗಳಿಗೆ ಸೇರಿ ಸುಮಾರು 3 ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದೆ.ಬುಧವಾರ ರಾತ್ರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ, ಗುರುವಾರ ಹಗಲಿನಲ್ಲಿ ಬಿಸಿಲು ಕಾಣಿಸಿಕೊಂಡಿತಾದರೂ, ಸಂಜೆಯಾಗುತ್ತಲೇ ಭಾರೀ ಗಾಳಿ ಮಳೆಯಾಗಿದೆ.ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಕೂಡ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಜೊತೆಗೆ ಸಮುದ್ರ ತೀರದಲ್ಲಿ 35 - 40 ಕಿಮಿ ವೇಗದಲ್ಲಿ ಗಾಳಿ ಬೀಸುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.ಬುಧವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಗಾಳಿ, ಮಳೆಗೆ ಅನೇಕ ಮನೆಗಳ ಮೇಲೆ ಮರುಗಳು ಬಿದ್ದು ಸಾಕಷ್ಟು ಹಾನಿಯಾಗಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಶೋಭಾ ಅವರ ಮನೆಯ ಮೇಲೆ ಮರ ಬಿದ್ದು 5,000 ರು., ಬ್ರಹ್ಮಾವರ ತಾಲೂಕಿನ ಬನ್ನಾಡಿ ಗ್ರಾಮದ ಪಲ್ಲವಿ ಪೂಜಾರ್ತಿ ಅವರ ಮನೆಯ ಮೇಲೆ ಮರ ಬಿದ್ದು 20,000 ರು., ಬೈಕಾಡಿ ಗ್ರಾಮದ ಲೂಕಾಸ್ ಲೂವಿಸ್ ಅವರ ಮನೆಯ ಮೇಲೆ ಮರ ಬಿದ್ದು 25,000 ರು., ಆರೂರು ಗ್ರಾಮದ ಭಾಸ್ಕರ ಪೂಜಾರಿ ಅವರ ಮನೆಯ ಮೇಲೆ ಮರಬಿದ್ದು 30,000 ರು., ಜಯಂತಿ ಹಾಂಡ್ತಿ ಅವರ ಮನೆಯ ಮೇಲೆ ಮರಬಿದ್ದು 20,000 ರು., ಉಡುಪಿ ತಾಲೂಕಿನ ಕುಕ್ಕೆಹಳ್ಳಿ ನಾಗರಾಜ ತಂತ್ರಿ ಅವರ ಮನೆಯ ಮೇಲೆ ಮರಬಿದ್ದು 10,000 ರು. ಗಳಷ್ಟು ಹಾನಿಯಾಗಿದೆ.ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಸಂತಾನ ಮಸ್ಕರೇನ್ಹಸ್ ಅವರ ಮನೆಗೆ ಗಾಳಿ, ಮಳೆಯಿಂದ 10,000 ರು., ನೀಲಾವರ ಗ್ರಾಮದ ಗಿರಿಜ ಬಾಯಿ ಅವರ ಮನೆಗೆ 50,000 ರು., ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಿನೋದ ಪೂಜಾರಿ ಅವರ ಮನೆಯ ಶೀಟ್ ಹಾರಿ 10,000 ರು., ಕುಕ್ಕೆಹಳ್ಳಿ ಗ್ರಾಮದ ಲಕ್ಷ್ಮಿ ಆಚಾರ್ತಿ ಅವರ ಮನೆಗೆ 25,000 ರು. ನಷ್ಟ ಸಂಭವಿಸಿದೆ.ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಸುಮನಾ ಅವರಿಗೆ 20,000 ರು., ಸರೋಜ ಅವರಿಗೆ 15,000 ರು., ಜಯಕರ ಶೆಟ್ಟಿ ಅವರಿಗೆ 15,000 ರು.ಗಳಷ್ಟು ಗಾಳಿಯಿಂದ ಅಡಕೆ ತೋಟಗಳಿಗೆ ಹಾನಿಯಾಗಿದೆ. ಉಡುಪಿ ತಾಲೂಕಿನ ಮೂಡತೊನ್ಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಮಳೆಯಿಂದ ಹಾನಿಯಾಗಿದೆ.