ಸಾರಾಂಶ
ಹಾವೇರಿ: ಕಳೆದ ವರ್ಷ ಹಾವೇರಿ ಜಿಲ್ಲೆಯ ಅನ್ನದಾತರು ಮಳೆ ಇಲ್ಲದೆ ತೀವ್ರ ಬರಗಾಲದಿಂದ ಕಂಗಾಲಗಿದ್ದರು. ಅದರೆ ಈಗ ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗಿದೆ. ಹೀಗಾಗಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ಘಟನೆ ಮಂಗಳವಾರ ಹಾವೇರಿಯ ರೈತ ಸಂಪರ್ಕ ಕೇಂದ್ರ ಮುಂದೆ ನಡೆದಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಸೋಯಾಬೀನ್, ಶೇಂಗಾ, ಹೆಸರು ಬೀಜವನ್ನು ವಿತರಣೆ ಮಾಡಲಾಗುತ್ತಿದೆ. ಕಳೆದ ಬಾರಿ ತೀವ್ರ ಬರಗಾಲದಿಂದ ಬೇಸತ್ತು ಹೋಗಿದ್ದರು. ಈಗ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ಬೀಜಕ್ಕಾಗಿ ರೈತರು ಕ್ಯೂ ನಿಂತು ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಗದ್ದಲದ ನಡುವೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರು ಹೆಚ್ಚಿನ ಕೌಂಟರ್ ಓಪನ್ ಮಾಡಿ ಬೀಜ ವಿತರಣೆ ಮಾಡಲು ಆಗ್ರಹಿಸಿದ್ದಾರೆ.ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ: ಹಾವೇರಿ ತಾಲೂಕಿನ ಹಾವೇರಿ, ಕರ್ಜಗಿ ಹಾಗೂ ಗುತ್ತಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಬಿತ್ತನೆ ಬೀಜಗಳಾದ ಶೇಂಗಾ, ಸೋಯಾಅವರೆ, ತೊಗರಿ, ಹೆಸರು, ಗೋವಿನಜೋಳ, ಭತ್ತ ಹಾಗೂ ಇನ್ನಿತರ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದ್ದಾರೆ.
ಹಾವೇರಿ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ತಮ್ಮ ರೈತ ನೋಂದಣಿ ಸಂಖ್ಯೆ ಅಥವಾ ಆಧಾರ ಸಂಖ್ಯೆಯೊಂದಿಗೆ ತಮ್ಮ ಜಮೀನಿನ ಉತಾರ ನೀಡಿ, ತಮ್ಮ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಗರಿಷ್ಠ ೫ ಎಕರೆವರೆಗೆ ಬಿತ್ತನೆ ಬೀಜ ಖರೀದಿಸಬಹುದು. ಬಿತ್ತನೆ ಬೀಜಗಳ ಪ್ಯಾಕೆಟ್‌ಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಅವುಗಳನ್ನು ಕೆ-ಕಿಸಾನ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.ತಾಲೂಕಿನಲ್ಲಿ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದ್ದು, ಅಧಿಕೃತ ಪರವಾನಗಿ ಹೊಂದಿದ ರಸಗೊಬ್ಬರ ಮಾರಾಟಗಾರರಿಂದ ಖರೀದಿಸಬಹುದಾಗಿದೆ. ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಪಿಒಎಸ್ ಉಪಕರಣದ ಮೂಲಕ ರಸಗೊಬ್ಬರಗಳನ್ನು ಖರೀದಿಸಬಹುದಾಗಿದೆ. ರೈತರು ಕೇವಲ ಒಂದೇ ಬಗೆಯ ರಸಗೊಬ್ಬರಕ್ಕೆ ಅವಲಂಬಿತರಾಗದೇ ಗಂಧಕ ಹಾಗೂ ಪೊಟ್ಯಾಷ್ ಅಂಶಗಳಿರುವ ೨೦:೨೦:೦:೧೩, ೧೦:೨೬:೨೬ ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶಗಳ ಸಮಗ್ರ ನಿರ್ವಹಣೆ ಸಾಧ್ಯ ಎಂದು ತಿಳಿಸಿದ್ದಾರೆ.ಪ್ರಸ್ತುತ ಮುಂಗಾರಿನಲ್ಲಿ ಹಾವೇರಿ ತಾಲೂಕಿನಲ್ಲಿ ಈ ವರೆಗೆ ೧೦೧ ಮಿ.ಮೀ ಮಳೆಯಾಗಿದ್ದು, ರೈತರು ಭೂಮಿ ಸಿದ್ಧತೆ ಕಾರ್ಯ ನಡೆಸಿದ್ದು, ವಿವಿಧ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳ ಖರೀದಿಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಪ್ರಮುಖ ಬೆಳೆಗಳಾದ ಗೋವಿನಜೋಳ ಸುಮಾರು ೩೯೧೨೦ ಹೆಕ್ಟೇರ್, ಸೊಯಾಅವರೆ ೩೧೪೫ ಹೆಕ್ಟೇರ್, ಶೇಂಗಾ ೨೮೬೨ ಹೆಕ್ಟೇರ್ ಸೇರಿದಂತೆ ಒಟ್ಟಾರೆ ೫೩೭೬೨ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಮುಂಗಾರು ಬೆಳೆಗಳ ಬಿತ್ತನೆ ಕ್ಷೇತ್ರ ಆವರಿಸುವ ಗುರಿ ಹೊಂದಲಾಗಿದೆ ಎಂಸು ತಿಳಿಸಿದ್ದಾರೆ.