ಕನ್ನಡಪ್ರಭವಾರ್ತೆ ತಿಪಟೂರು

ಕಲ್ಪತರು ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರ ಶ್ರೀ ಕೆರೆಗೋಡಿ-ರಂಗಾಪುರದ ಶ್ರೀ ಕೆರೆಗೋಡಿ ಶಂಕರೇಶ್ವರ ಸ್ವಾಮಿ ಶಿವರಥೋತ್ಸವ ಮಂಗಳವಾರ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ವಿವಿಧ ರೀತಿ ಹೂವು, ಹಾರ, ಬಾಳೆಗೊನೆ, ಮಾವಿನ ತೋರಣ, ಬಣ್ಣ ಬಣ್ಣದ ವಸ್ತ್ರಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಶ್ರೀಗಳು ಶ್ರೀಶಂಕರೇಶ್ವರ ಸ್ವಾಮಿ ಸಹಿತ ರಥಕ್ಕೆ ಪೂಜೆ ನೆರವೇರಿಸಿದ ನಂತರ ಭಕ್ತ ಸಮೂಹ ರಥ ಎಳೆದರು. ರಥದ ಮೇಲೆ ಭಕ್ತರು ದವನದ ಪತ್ರೆ, ಹೂವು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಈಡೇರುವಂತೆ ಪ್ರಾರ್ಥಿಸಿದರು.

ಶ್ರೀಗಳು ಆಶೀರ್ವಚನ ನೀಡಿ, ಹಬ್ಬ, ಜಾತ್ರೆಯಂತಹ ಆಚರಣೆಗಳು ಬಂಧು-ಬಾಂಧವರನ್ನೆಲ್ಲ ಒಂದು ಮಾಡುತ್ತವೆ. ಆಗಾಗ್ಗೆ ಒಂದೆಡೆ ಕುಟುಂಬ ಸಮೇತ ಸೇರಿ ಅಭಿಪ್ರಾಯ ಹಂಚಿಕೊಳ್ಳಲು ನೆರವಾಗುತ್ತವೆ. ಗ್ರಾಮದಲ್ಲಿ ಒಗ್ಗಟ್ಟು ಹಾಗೂ ಉತ್ತಮ ವಾತಾವರಣ ಸೃಷ್ಟಿಸುವ ವೇದಿಕೆಯನ್ನು ಜಾತ್ರೆಗಳು ಒದಗಿಸುತ್ತವೆ. ಯುವಪೀಳಿಗೆ ಧಾರ್ಮಿಕ ಆಚರಣೆಗಳನ್ನು ಅರಿತುಕೊಳ್ಳಲು ಸಹಕರಿಸುತ್ತವೆ. ಕಲ್ಪತರು ನಾಡಿನಲ್ಲಿ ಬರಗಾಲ ತಾಂಡವವಾಡುತ್ತಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗುತ್ತಿರುವುದು ನೋವುಂಟು ಮಾಡಿದೆ. ಶ್ರೀಕ್ಷೇತ್ರದ ಆರಾಧ್ಯ ದೈವ ಶ್ರೀ ಶಂಕರೇಶ್ವರ ಮತ್ತು ಶ್ರೀ ರಂಗನಾಥಸ್ವಾಮಿಯವರ ಕೃಪೆ ಹಾಗೂ ಹಿರಿಯ ಗುರುಗಳ ತಪೋಶಕ್ತಿಯಿಂದ ಮುಂದಿನ ದಿನಮಾನಗಳಲ್ಲಿ ನಾಡಿಗೆ ಉತ್ತಮ ಮಳೆ - ಬೆಳೆಯಾಗಲಿ ಎಂದರು.ಹಿರಿಯರ ಮಾರ್ಗದರ್ಶನ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು, ಜೀವನದಲ್ಲಿ ಮೌಲ್ಯಗಳನ್ನು ಕಾಪಾಡಿಕೊಂಡು ಧರ್ಮಾಧಾರಿತ ಬದುಕು ಸಾಗಿಸಿದಲ್ಲಿ ಸ್ವಾಭಿಮಾನಿ-ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಈ ದಿಕ್ಕಿನಲ್ಲಿ ಭಕ್ತರು ಸಾಗಲು ಕರೆ ನೀಡಿದರು. ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.