ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆ

| Published : Nov 10 2023, 01:00 AM IST

ಸಾರಾಂಶ

ಸತತ ಮಳೆ ಕೊರತೆಯಿಂದ ಕಂಗೆಟ್ಟಿರುವ ಜಿಲ್ಲೆಯ ರೈತಾಪಿ ವರ್ಗದಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಉತ್ತಮ ಮಳೆಯಿಂದಾಗಿ ದೀಪಾವಳಿಯ ಪೂರ್ವದಲ್ಲಿಯೇ ಕೃಷಿ ವಲಯದಲ್ಲಿ ಆಸೆಯ ದೀಪವನ್ನು ಬೆಳಗಿಸಿದೆ.

ಗದಗ: ಸತತ ಮಳೆ ಕೊರತೆಯಿಂದ ಕಂಗೆಟ್ಟಿರುವ ಜಿಲ್ಲೆಯ ರೈತಾಪಿ ವರ್ಗದಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಉತ್ತಮ ಮಳೆಯಿಂದಾಗಿ ದೀಪಾವಳಿಯ ಪೂರ್ವದಲ್ಲಿಯೇ ಕೃಷಿ ವಲಯದಲ್ಲಿ ಆಸೆಯ ದೀಪವನ್ನು ಬೆಳಗಿಸಿದೆ. ಈಗಾಗಲೇ ಮುಂಗಾರು ಕಳೆದುಕೊಂಡಿದ್ದ ರೈತರು ಇನ್ನೇನು ಹಿಂಗಾರು ಹಂಗಾಮು ಕೂಡಾ ಸಂಪೂರ್ಣ ಕೈ ಕೊಟ್ಟಿತು ಎನ್ನುವಷ್ಟರಲ್ಲಿ ಪ್ರಾರಂಭವಾಗಿರುವ ಮಳೆ, ಇನ್ನು ನಾಲ್ಕೈದು ದಿನಗಳ ಕಾಲ ಮುಂದುವರಿಯಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಆಹಾರ ಧಾನ್ಯಕ್ಕೆ ಅವಶ್ಯಕ:ಹಿಂಗಾರು ಹಂಗಾಮಿನಲ್ಲಿ ಪ್ರಮುಖ ಆಹಾರ ಬೆಳೆಗಳಾದ ಜೋಳ, ಗೋಧಿಗೆ ಸದ್ಯದ ಮಳೆ ಹೆಚ್ಚು ಸಹಕಾರಿಯಾಗಿದೆ. ಜನರಿಗೆ ಆಹಾರಕ್ಕೆ ಅನುಕೂಲವಾಗುವುದರೊಟ್ಟಿಗೆ ಜಾನುವಾರುಗಳಿಗೆ ವರ್ಷವಿಡೀ ಬೇಕಾಗುವ ಮೇವು ಮತ್ತು ಹೊಟ್ಟಿಗೆ ಎರಡೂ ಬೆಳೆಗಳು ಅತ್ಯಂತ ಅವಶ್ಯಕವಾಗಿದ್ದು ಮಳೆ ಜೀವ ಕಳೆ ಮೂಡಿಸಿದೆ. ಇನ್ನು ಹಿಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಬೆಳೆಗೆ ಮಳೆ ಬಹಳಷ್ಟು ಉಪಯುಕ್ತಕಾರಿಯಾಗಿದೆ. ಇದರಿಂದಾಗಿ ರೈತರಿಗೆ ಬಿತ್ತನೆ ಮಾಡಿದ ಬೀಜಗಳಷ್ಟಾದರೂ ಮರಳಿ ಬರುತ್ತವೆ ಎನ್ನುವ ವಿಶ್ವಾಸ ಮೂಡಿಸಿದೆ.ತೋಟಗಾರಿಕಾ ಬೆಳೆಗಳಿಗೆ ಹಾನಿ: ಗದಗ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ರಭಸವಾಗಿ ಸುರಿದ ಮಳೆಯಿಂದಾಗಿ ಒಂದೆಡೆ ಒಣಬೇಸಾಯ ರೈತರಿಗೆ ಅನುಕೂಲವಾಗಿದ್ದರೆ, ತೋಟಗಾರಿಕಾ ಬೆಳೆಗಳನ್ನು ಬೆಳೆವ ರೈತರಿಗೆ ಮಳೆಯಿಂದಾಗಿ ಅಲ್ಪ ಪ್ರಮಾಣದ ಹಾನಿಯಾಗಿದೆ. ಅದರಲ್ಲಿಯೂ ದೀಪಾವಳಿ ವೇಳೆಗೆ ಉತ್ತಮ ಧಾರಣೆ ಸಿಗುವ ನಿರೀಕ್ಷೆಯಲ್ಲಿ ರೈತರು ಬೆಳೆದಿದ್ದು ಸೇವಂತಿ, ಚೆಂಡು ಹೂ, ಸುಗಂಧಿಗೆ ಹೂವಿಗೆ, ಬಾಳೆ, ದಾಳಿಂಬೆ ಹೀಗೆ ಹಣ್ಣುಗಳಿಗೆ ರಭಸದ ಮಳೆ ವ್ಯಾಪಕ ಹೊಡೆತ ನೀಡಿದೆ. ಸಂಪೂರ್ಣ ಇಲ್ಲ: ಗುರುವಾರ ನಸುಕಿನ ಜಾವ ಸುರಿದ ಮಳೆಯ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಸುರಿದಿಲ್ಲ, ಅದರಲ್ಲಿಯೂ ನರಗುಂದ ತಾಲೂಕಿನಲ್ಲಿ ಮಳೆಯ ದರ್ಶನವೇ ಇಲ್ಲ. ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಮುಂಡರಗಿ ತಾಲೂಕಿನ ಕೆಲ ಭಾಗಗಳಲ್ಲಿ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಕೆಲ ಭಾಗಗಳಲ್ಲಿ ಮಾತ್ರ ಮಳೆಯಾಗಿದ್ದು, ಇನ್ನು ಹೆಚ್ಚಿನ ಮಳೆ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದಾರೆ.